
ಮಡಿಕೇರಿ ಜು.5 NEWS DESK : ಕುಶಾಲನಗರದಲ್ಲಿರುವ ವಿದ್ಯಾರ್ಥಿನಿಯರ ಬಿಸಿಎಂ ಹಾಸ್ಟೆಲ್ ನಲ್ಲಿ ಆಹಾರ ಸಾಮಾಗ್ರಿಗಳು ಕಳ್ಳತನವಾಗುತ್ತಿದ್ದು, ಇಲ್ಲಿನ ಸಿಬ್ಬಂದಿಗಳಿಂದಲೇ ಈ ಕೃತ್ಯ ನಡೆದಿದೆ ಎಂದು ಸಾಮಾಜಿಕ ಹೋರಾಟಗಾರ ಬಿ.ಡಿ.ಅಣ್ಣಯ್ಯ ಆರೋಪಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಶಾಲನಗರದ ಗಂಧದಕೋಟೆಯಲ್ಲಿ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿನಿಯರಿಗಾಗಿ ಬಿಸಿಎಂ ವಸತಿ ನಿಲಯವಿದ್ದು, ಇಲ್ಲಿ ಸುಮಾರು 200 ವಿದ್ಯಾರ್ಥಿಗಳಿದ್ದಾರೆ. ವಸತಿ ನಿಲಯಕ್ಕೆ ಬಂದ ಆಹಾರ ಸಾಮಾಗ್ರಿಗಳನ್ನು ಕಳ್ಳತನ ಮಾಡಿ ನರ್ಸಿಂಗ್ ಹಾಸ್ಟೆಲ್ ವೊಂದರಲ್ಲಿ ಇಟ್ಟಿದ್ದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ ಎಂದರು. ಕಳ್ಳತನದ ಕುರಿತು ವಿದ್ಯಾರ್ಥಿನಿಯರು ನೀಡಿದ ಮಾಹಿತಿಯ ಆಧಾರದಲ್ಲಿ ತಾವು ಪೊಲೀಸರ ಸಹಕಾರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದೆವು. ತಾಲ್ಲೂಕು ಬಿಸಿಎಂ ಅಧಿಕಾರಿಗೆ ಕರೆ ಮಾಡಿ ಪ್ರಕರಣದ ಕುರಿತು ಮಾಹಿತಿ ನೀಡಿ ಸ್ಥಳಕ್ಕೆ ಬರುವಂತೆ ಕೋರಿಕೊಂಡರೂ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ. ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಅವರಿಗೆ ದೂರು ನೀಡಿ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದೇವೆ. ಮುಂದಿನ 1 ವಾರದಲ್ಲಿ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಜಿಲ್ಲಾ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ವಸತಿ ನಿಲಯದಲ್ಲಿ ಆಹಾರ ಸಾಮಗ್ರಿಗಳು ಕಳ್ಳತನವಾಗುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ವಿದ್ಯಾರ್ಥಿಗಳ ಹಿತ ಕಾಯಲು ಮತ್ತು ಸರ್ಕಾರದ ಸೌಲಭ್ಯ ದುರುಪಯೋಗವಾಗುವುದನ್ನು ತಡೆಯಲು ಬಿಸಿಎಂ ಇಲಾಖೆಯ ಕುಶಾಲನಗರ ತಾಲ್ಲೂಕು ಅಧಿಕಾರಿ ಹಾಗೂ ವಸತಿ ನಿಲಯದ ಕೆಲವು ಸಿಬ್ಬಂದಿಗಳನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಿ ಸೂಕ್ತ ತನಿಖೆ ನಡೆಸಬೇಕೆಂದು ಬಿ.ಡಿ.ಅಣ್ಣಯ್ಯ ಆಗ್ರಹಿಸಿದರು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಕೆ.ಪಿ.ಸೋಮಣ್ಣ ಹಾಗೂ ದಲಿತ ಸಂಘರ್ಷ ಸಮಿತಿಯ ಭೀಮ ಘರ್ಜನೆಯ ಜಿಲ್ಲಾ ಸಂಚಾಲಕ ಎಲ್.ಎಂ.ನಾಗರಾಜು ಉಪಸ್ಥಿತರಿದ್ದರು.








