
ಮಡಿಕೇರಿ ಜು.5 NEWS DESK : ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನದ ಮೂಲಕ ವ್ಯಾಪಾರಿ ಕ್ಷೇತ್ರವನ್ನು ಉನ್ನತೀಕರಣಗೊಳಿಸುವ ಉದ್ದೇಶದಿಂದ ಮೈಸೂರಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್(ಕೆಡಿಇಎಂ) ವತಿಯಿಂದ ‘ಬಿಗ್ ಟೆಕ್ ಶೋ 2025’ ನಡೆಯಿತು. ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಐಟಿ, ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರು ರಾಜ್ಯದ ಮಾಹಿತಿ ತಂತ್ರಜ್ಞಾನ ರಫ್ತಿನಲ್ಲಿ ಮೈಸೂರು ವಲಯ ಎರಡನೇ ಸ್ಥಾನದಲ್ಲಿದೆ. ಭವಿಷ್ಯದಲ್ಲಿ ದೇಶದ ಅತ್ಯುತ್ತಮ ತಂತ್ರಜ್ಞಾನದ ಪ್ರದೇಶವಾಗಿ ರೂಪುಗೊಳ್ಳಲಿದೆ ಎಂದರು. ವಿಜ್ಞಾನ ಹಾಗೂ ತಂತ್ರಜ್ಞಾನ ಕಾರ್ಯದರ್ಶಿ ಏಕರೂಪ್ ಕೌರ್, ಭಾರತೀಯ ಮಾಹಿತಿ ತಂತ್ರಜ್ಞಾನ ಪಾರ್ಕ್ ನಿರ್ದೇಶಕ ಸಂಜಯ್ ತ್ಯಾಗಿ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್(ಕೆಡಿಇಎಂ) ಅಧ್ಯಕ್ಷ ಬಿ.ವಿ.ನಾಯ್ಡು, ಸಿಇಒ ಸಂಜೀವ್ ಗುಪ್ತಾ, ಮೈಸೂರು ಕ್ಲಸ್ಟರ್ ಮುಖ್ಯಸ್ಥ ಜಿ.ಎನ್.ಸುದೀರ್ ಮತ್ತಿತರ ಪ್ರಮುಖರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು. *ಕೊಡಗಿನಿಂದ 31 ಮಂದಿ ಭಾಗಿ* ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಜಿಲ್ಲಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ನಿರ್ದೇಶಕರುಗಳಾದ ನವೀನ್ ಅಂಬೆಕಲ್, ಸುಂದರ್, ಕೇಶವ ಕಾಮತ್, ರಾಜ್ಯ ಸದಸ್ಯ ಗಿರೀಶ್ ಗಣಪತಿ, ಮಡಿಕೇರಿ ನಗರಾಧ್ಯಕ್ಷ ಸಂತೋಷ್ ಅಣ್ವೇಕರ್, ಸಹ ಕಾರ್ಯದರ್ಶಿ ವಿನಾಯಕ ಕೆ., ಮಾಜಿ ಅಧ್ಯಕ್ಷ ಧನಂಜಯ ಎಂ., ಕುಶಾಲನಗರ ಅಧ್ಯಕ್ಷ ನಾಗೇಶ್ ಸೇರಿದಂತೆ ಜಿಲ್ಲೆಯ 31 ಪ್ರತಿನಿಧಿಗಳು ‘ಬಿಗ್ ಟೆಕ್ ಶೋ 2025’ ರಲ್ಲಿ ಪಾಲ್ಗೊಂಡಿದ್ದರು.
‘ಬಿಗ್ ಟೆಕ್ ಶೋ’ ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಕೊಡಗು ಜಿಲ್ಲೆಯಲ್ಲೂ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಗೆ ಪ್ರೇರಣೆ ನೀಡಲು ಸ್ಫೂರ್ತಿಯನ್ನು ತುಂಬಿದೆ ಎಂದು ಬಿ.ಆರ್.ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು. ಸಂತೋಷ್ ಅಣ್ವೇಕರ್ ಮಾತನಾಡಿ ಭವಿಷ್ಯದಲ್ಲಿ ವ್ಯಾಪಾರಿ ಕ್ಷೇತ್ರ ಮಾಹಿತಿ ತಂತ್ರಜ್ಞಾನದ ಮೂಲಕವೇ ಪ್ರಗತಿ ಸಾಧಿಸಬೇಕಾಗಿದ್ದು, ಕೊಡಗು ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಇದರ ಅನಿವಾರ್ಯತೆ ಇದೆ ಎಂದರು.









