
ಕುಶಾಲನಗರ ಜು.7 NEWS DESK : ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಜೂನ್ ಅಂತ್ಯಕ್ಕೆ ಸೇವಾ ನಿವೃತ್ತಿ ಹೊಂದಿದ ಶಿಕ್ಷಕಿ ಎ.ಭೋಜಮ್ಮ ಅವರನ್ನು ಶಾಲೆಯ ಸಿಬ್ಬಂದಿ ಹಾಗೂ ಎಸ್.ಡಿ.ಎಂ.ಸಿ.ವತಿಯಿಂದ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ನಿವೃತ್ತಗೊಂಡ ಶಿಕ್ಷಕಿ ಭೋಜಮ್ಮ ಅವರನ್ನು ಸನ್ಮಾನಿಸಿ ಮಾತನಾಡಿದ ಸಂಪಾಜೆ ಕಂದಾಯ ಹೋಬಳಿಯ ಪ್ರಭಾರ ಉಪ ತಹಶೀಲ್ದಾರ್ ಬಿ.ಜೆ.ವೆಂಕಟೇಶ್, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳ ಪ್ರಗತಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು ಎಂದರು. ಶಾಲೆಯಲ್ಲಿ ಅವರು ಸದಾ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ವಿದ್ಯಾರ್ಥಿ ವೃಂದ ಹಾಗೂ ಸಿಬ್ಬಂದಿಗಳ ಪ್ರೀತಿಗೆ ಶಿಕ್ಷಕಿ ಭೋಜಮ್ಮ ಅವರು ಪಾತ್ರರಾಗಿರುವುದು ಹೆಮ್ಮೆಯ ಸಂಗತಿ ಎಂದರು. ಕೂಡಿಗೆ ಕ್ಲಸ್ಟರ್ ನ ಸಿ.ಆರ್.ಪಿ. , ಕೆ.ಶಾಂತಕುಮಾರ್ ಮಾತನಾಡಿ, ಶಿಕ್ಷಕಿ ಭೋಜಮ್ಮ ಅವರು ಶಾಲೆಗೆ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದು, ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣವಾಗಿದೆ ಎಂದರು. ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಕರು ಉತ್ತಮ ಸೇವೆ ಸಲ್ಲಿಸಿದಾಗ ಸಮಾಜವು ಶಿಕ್ಷಕರ ಬಗ್ಗೆ ಹೆಮ್ಮೆ ಪಡುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ, ಶಿಕ್ಷಕಿ ಭೋಜಮ್ಮ ಮಕ್ಕಳ ಅಚ್ಚು ಮೆಚ್ಚಿನ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪೋಷಕರ ಪ್ರೀತಿ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು. ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, “ಮಕ್ಕಳ ಪ್ರೀತಿಯನ್ನು ಗೆದ್ದು ಮಕ್ಕಳ ಭವಿಷ್ಯ ರೂಪಿಸಿದ ಶಿಕ್ಷಕಿ ಭೋಜಮ್ಮ ಅವರ ವಿಶ್ರಾಂತ ಜೀವನ ಸುಖಮಯವಾಗಿರಲಿ,’’ ಎಂದು ಶುಭ ಹಾರೈಸಿದರು. ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಎ.ಭೋಜಮ್ಮ, ತಾವುಗಳು ಶಿಕ್ಷಕಿಯಾಗಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಶಿಕ್ಷಕರ ಸಹಕಾರದಿಂದ ಪ್ರಾಮಾಣಿಕ ಸೇವೆ ಸಲ್ಲಿಸಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಪವಿತ್ರ, ಸದಸ್ಯರಾದ ಪೂಜಾ ,ಅರ್ಪಿತ ,ಹರೀಶ್, ಶಾಹಿನ, ಮಂಜುನಾಥ್, ಸಂಪಾಜೆಯ ಪೆರುಮುಂಡ ಮನು, ಪ್ರಸಾದ್ ಪೂಜಾರಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಡಿ.ವಿ.ಗಣೇಶ್, ಪ್ರಾಥಮಿಕ ಶಾಲೆಯ ಹಾಗೂ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. :: ಶಿಕ್ಷಕರ ಸಂಘದಿಂದ ಸನ್ಮಾನ :: ಇದಕ್ಕೂ ಮೊದಲು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರವಾಗಿ ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಕೆ.ಬಸವರಾಜ್, ಪದಾಧಿಕಾರಿಗಳಾದ ಟಿ.ಎಸ್. ಶಶಿಕುಮಾರ್, ದೇವಾನಂದ ಇತರರು ಇದ್ದರು. ತಮ್ಮ ಶಿಕ್ಷಕ ಹುದ್ದೆಯ ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ಶಿಕ್ಷಕಿ ಎ.ಭೋಜಮ್ಮ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ವರ್ಗಕ್ಕೆ ಭೋಜನ ವ್ಯವಸ್ಥೆ ಕಲ್ಪಿಸಿದ್ದರು.








