ಮಡಿಕೇರಿ NEWS DESK ಜು.7 : ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಸ್ವಚ್ಛತಾ ಮತ್ತು ಇತರೆ ಕಾರ್ಮಿಕರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜು.9 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಆರ್.ಭರತ್ ಹಾಗೂ ಕಾರ್ಯದರ್ಶಿ ಹೆಚ್.ಕೆ.ಜಾನಕಿ ತಿಳಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬುಧವಾರ ಬೆಳಿಗ್ಗೆ 10.30 ಗಂಟೆಗೆ ವಿರಾಜಪೇಟೆ ಮತ್ತು ಕುಶಾಲನಗರ ತಹಶೀಲ್ದಾರರ ಕಚೇರಿ ಎದುರು ಆಸ್ಪತ್ರೆಗಳ ಸ್ವಚ್ಛತಾ ಕಾರ್ಮಿಕರು ಪ್ರತಿಭಟನೆ ನಡೆಸಿ ಬೇಡಿಕೆಗಳ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು, ಸ್ವಚ್ಛತಾ ಮತ್ತು ಡಿ ಗ್ರೂಪ್ ನೌಕರರಿಗೆ ಮಾಸಿಕ ಕನಿಷ್ಟ ವೇತನ 31 ಸಾವಿರ ನೀಡಬೇಕು, ನೌಕರರನ್ನು ಗುತ್ತಿಗೆ, ಕಾಂಟ್ರೆಕ್ಟ್ ಪದ್ಧತಿಯಿಂದ ವಿಮೋಚನೆಗೊಳಿಸಿ ಆಸ್ಪತ್ರೆಗಳಲ್ಲೇ ವೇತನ ನೀಡುವಂತಾಗಬೇಕು, ಪ್ರತಿ 5ನೇ ತಾರೀಖಿನ ಒಳಗೆ ಕಾರ್ಮಿಕರ ವೇತನ ನೀಡಬೇಕು, ಹೆರಿಗೆ ಭತ್ಯೆ, ಇಎಸ್‌ಐ ಸೌಲಭ್ಯ, ಪಿ.ಎಫ್ ಹಣವನ್ನು ಸರಿಯಾದ ರೀತಿಯಲ್ಲಿ ಗುತ್ತಿಗೆದಾರರು ನೀಡುವಂತಹ ನೀತಿಯನ್ನು ಜಾರಿಗೊಳಿಸಬೇಕು, ಕಾರ್ಮಿಕರ ಸಮಸ್ಯೆ ಮತ್ತು ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊAಡು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.








