
ಮಡಿಕೇರಿ ಜು.8 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದ್ದು, ಅಮಾಯಕರ ಸಾವು ನಿರಂತರವಾಗಿದೆ. ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಅರಣ್ಯ ಸಚಿವರು ಹಾಗೂ ವಿರಾಜಪೇಟೆ ಶಾಸಕರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಮ್ ಆದ್ಮಿ ಪಾರ್ಟಿಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.
ಪೊನ್ನಂಪೇಟೆ ತಾಲ್ಲೂಕಿನ ಪೊನ್ನಪ್ಪಸಂತೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆಯ ಕುರಿತು ಬೇಸರ ವ್ಯಕ್ತಪಡಿಸಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅರಣ್ಯ ಇಲಾಖೆಯ ನಿರ್ಲಕ್ಷ್ಯ, ಅರಣ್ಯ ಸಚಿವರು ಹಾಗೂ ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದ ವನ್ಯಜೀವಿ ದಾಳಿ ತಡೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲವೆಂದು ಟೀಕಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕರಡಿಗೊಡು, ಮಾಲ್ದಾರೆ, ಬಾಳೆಲೆ, ಆನಂದಪುರ, ಮಾಯಮುಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾಡಾನೆ ದಾಳಿಯಿಂದ ಸಾವು ನೋವುಗಳಾಗುತ್ತಿದೆ. ಇದೀಗ ಪೊನ್ನಪ್ಪಸಂತೆ ಗ್ರಾಮದಲ್ಲಿ ಆನೆ ದಾಳಿಯಿಂದ ಅಮಾಯಕ ವ್ಯಕ್ತಿ ಮೃತಪಟ್ಟಿದ್ದಾರೆ. ಕೃಷಿಯನ್ನೇ ಅವಲಂಬಿಸಿರುವ ಕೊಡಗಿನ ರೈತಾಪಿ ವರ್ಗ ಕಾಡಾನೆ ದಾಳಿಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ರೀತಿಯಲ್ಲಿ ತೋಟಗಳು ನಾಶವಾಗುತ್ತಿವೆ. ಬೆಳೆಗಾರರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ, ಮಾನವನ ಜೀವಕ್ಕೆ ಬೆಲೆಯೇ ಇಲ್ಲದಾಗಿದೆ. ಕಾಡಾನೆಯೊಂದಿಗೆ ಹುಲಿ, ಚಿರತೆ, ಕಾಡೆಮ್ಮೆ, ಕಾಡುಹಂದಿ ಮತ್ತು ಕೋತಿಗಳಿಂದಲೂ ದಾಳಿಯಾಗುತ್ತಿದೆ. ವನ್ಯಜೀವಿಗಳ ಉಪಟಳದಿಂದ ಜಿಲ್ಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಪರಿಸ್ಥಿತಿ ಹೀಗಿದ್ದರೂ ಅರಣ್ಯ ಸಚಿವರು ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿಲ್ಲ ಮತ್ತು ಜನರ ಸಂಕಷ್ಟವನ್ನು ಅರಿತು ಪರಿಹಾರ ಸೂಚಿಸುವ ಪ್ರಯತ್ನ ಮಾಡುತ್ತಿಲ್ಲ. ವಿರಾಜಪೇಟೆ ಕ್ಷೇತ್ರದ ಶಾಸಕರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಪ್ರಭಾವಿ ಸ್ಥಾನದಲ್ಲಿದ್ದರೂ ವನ್ಯಜೀವಿ ದಾಳಿ ತಡೆಗೆ ವೈಜ್ಞಾನಿಕ ಯೋಜನೆಯನ್ನು ರೂಪಿಸಿ ಜಾರಿಗೆ ತರುವ ಪ್ರಯತ್ನ ಮಾಡುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಭಾರೀ ಸಾಧನೆ ಮಾಡಿದ್ದೇವೆ ಎಂದು ಪ್ರಚಾರದಲ್ಲಿ ತೊಡಗಿದೆಯೇ ಹೊರತು ಅಮಾಯಕರ ಸಾವು, ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಭೋಜಣ್ಣ ಸೋಮಯ್ಯ ಆರೋಪಿಸಿದ್ದಾರೆ. ಕಾಡಾನೆಗಳ ಸರಣಿ ದಾಳಿಯ ನೈತಿಕ ಹೊಣೆ ಹೊತ್ತು ಅರಣ್ಯ ಸಚಿವರು ಹಾಗೂ ವಿರಾಜಪೇಟೆ ಶಾಸಕರು ರಾಜೀನಾಮೆ ನೀಡುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.







