
ಮಡಿಕೇರಿ ಜು.9 NEWS DESK : ಮೈಸೂರು-ಕುಶಾಲನಗರ ಎಕ್ಸ್ಪ್ರೆಸ್ವೇ ಕಾಮಗಾರಿಯ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕುಶಾಲನಗರ ರೈಲು ಸಂಪರ್ಕ ಯೋಜನೆಗೆ ಹಣ ಇಲ್ಲ ಎಂದು ರಾಜ್ಯಸರ್ಕಾರ ಭೂಸ್ವಾಧೀನ ನಡೆಸಿಲ್ಲ. ಕೊಡಗಿನ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರದ ಗ್ರಾಮ ಸಡಕ್ ಯೋಜನೆಯಡಿ ರಾಜ್ಯಸರ್ಕಾರವೇ ಪ್ರಸ್ತಾವ ಕಳಿಸಬೇಕಿದೆ. ಮೈಸೂರು-ಕುಶಾಲನಗರ ಎಕ್ಸ್ಪ್ರೆಸ್ವೇ ಕಾಮಗಾರಿಯ ನಾಲ್ಕು ಪ್ಯಾಕೇಜ್ ಪೈಕಿ ೩ರಲ್ಲಿ ಕೆಲಸ ಶುರುವಾಗಿದೆ. 1 ಪ್ಯಾಕೇಜ್‌ಗೆ ಪರಿಸರಕ್ಕೆ ಸಂಬಂಧಿಸಿದಂತೆ ಕ್ಲಿಯರೆನ್ಸ್ ಬೇಕಾಗಿದೆ. ಅದು ಬಂದ ಕೂಡಲೇ ಅಲ್ಲಿಯೂ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿರುವ ೨೪ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದು ಕೇವಲ ಒಂದೇ ಕ್ಷೇತ್ರದಲ್ಲಿ ಮಾತ್ರ. ವರ್ಷದ ಒಂದು ದಿನ ಮಾತ್ರ ರಾಜಕಾರಣ ಮಾಡಿ, ಉಳಿದೆಲ್ಲ ದಿನಗಳಲ್ಲೂ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಇದಕ್ಕೆ ಎಲ್ಲ ಶಾಸಕರು ಹಾಗೂ ರಾಜ್ಯಸರ್ಕಾರದ ಸಹಕಾರಬೇಕು. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ಕಡಿಮೆ ಮಾಡಲೂ ರಾಜ್ಯಸರ್ಕಾರ ಮುಂದಡಿ ಇಡಬೇಕಿದೆ. ಕೇಂದ್ರದ ಪ್ರವಾಸೋದ್ಯಮದ ವಿವಿಧ ಯೋಜನೆಗಳಡಿ ಕೊಡಗನ್ನೂ ಸೇರ್ಪಡೆ ಮಾಡಿಸಲೂ ರಾಜ್ಯಸರ್ಕಾರವೇ ಪ್ರಸ್ತಾಪ ಕಳುಹಿಸಬೇಕಿದೆ ಎಂದು ಅವರು ರಾಜ್ಯಸರ್ಕಾರದ ಪಾತ್ರದ ಕುರಿತು ಮಾತನಾಡಿದರು. ಇನ್ನು ನನ್ನ ವ್ಯಾಪ್ತಿಯಲ್ಲಿ ಮಾಡುವಂತಹ ಕೆಲಸಗಳನ್ನು ಈಗಾಗಲೇ ಮಾಡಲಾರಂಭಿಸಿರುವೆ. ಕೊಡಗಿಗೆ ಏರ್ ಸ್ಟ್ರಿಪ್ ತರುವ ಯೋಜನೆಗೆ ಕುಶಾಲನಗರದಲ್ಲಿ ೨ ಕಡೆ ಜಾಗ ಗುರುತಿಸಿದ್ದು, ಅವುಗಳಲ್ಲಿ ಒಂದನ್ನು ಅಂತಿಮಗೊಳಿಸಲಾಗುವುದು. ಪ್ರತಿ ಮನೆಗೂ ಕುಡಿಯುವ ನೀರು ತಲುಪಿಸಲೆಂದೇ ಅಮೃತ್ ಯೋಜನೆಗೆ ಕುಶಾಲನಗರ, ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆಯನ್ನು ಸೇರ್ಪಡೆಗೊಳಿಸಿ ಕಾಮಗಾರಿ ಭರದಿಂದ ನಡೆದಿದೆ. ಬಿಎಸ್‌ಎನ್‌ಎಲ್ ಟವರ್‌ಗಳ ಸಮಸ್ಯೆ ನಿವಾರಣೆಗೆ 18 ಬ್ಯಾಟರಿಗಳು ಹಾಗೂ ೧೫ ಪವರ್ ಜನರೇಟರ್‌ಗಳನ್ನು ನೀಡಲು ಕೇಂದ್ರ ಒಪ್ಪಿದೆ. ಸದ್ಯದಲ್ಲೆ ಅಳವಡಿಕೆ ಕಾರ್ಯವೂ ನಡೆಯಲಿದೆ ಎಂದು ಅವರು ತಾವು ಕೈಗೊಂಡ ಯೋಜನೆಗಳನ್ನು ಕುರಿತು ವಿವರ ನೀಡಿದರು. ಮಡಿಕೇರಿ ಸ್ಟೋನ್ ಹಿಲ್ ಬೆಟ್ಟದ ಮೇಲೆ ಸಂಗ್ರಹ ಆಗಿರುವ ಕಸ ಆದಷ್ಟು ಬೇಗ ತೆರವು ಮಾಡಲಾಗುವುದು. ಈಗ ಸಾಂಕೇತಿಕವಾಗಿ ಕೆಲಸ ಆರಂಭ ಆಗಿದೆ. ಕಸ ಸುರಿಯಲು ರಾಜ್ಯ ಸರ್ಕಾರ ಅರಣ್ಯ ಇಲಾಖೆ ಮೂಲಕ ಜಾಗದ ಸಮಸ್ಯೆ ಪರಿಹರಿಸಿಕೊಟ್ಟರೆ ಯೋಜನೆ ಬೇಗ ಕಾರ್ಯರೂಪಕ್ಕೆ ಬರಲಿದೆ. ಎಂಪಿ ಲಾಡ್ ನಿಧಿ ೫ ಕೋಟಿ ರೂ. ಇದ್ದು, ಈ ನಿಧಿಯಿಂದ ಹಲವೆಡೆ ಕೆಲಸ ನಡೆಯುತ್ತಿದೆ. ಅಗತ್ಯ ಇರುವ ಕೆಲಸಗಳ ಮಾಹಿತಿ ಪಡೆದು ಆದ್ಯತೆ ಮೇಲೆ ಪರಿಹಾರ ಕಲ್ಪಿಸಲಾಗುತ್ತದೆ. ಹೆಚ್ಚುವರಿ ಎನ್‌ಡಿಆರ್‌ಎಫ್ ಫಂಡ್ ತರಲು ಕೂಡ ಪ್ರಯತ್ನ ನಡೆದಿದೆ ಎಂದರು. ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರ ರೂಪದಲ್ಲಿ ಬಾಂಗ್ಲಾ ದೇಶೀಯರು ಕಾಣಿಸಿಕೊಳ್ಳುತ್ತಿರುವುದು ಗಂಭೀರ ವಿಷಯ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಗಮನ ಸೆಳೆಯಲಾಗುವುದು. ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಸೇವೆ ಉತ್ತಮಪಡಿಸಲು ಇಸ್ರೋ ತಂತ್ರಜ್ಞಾನ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ ಎಂದರು. ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಮಾತನಾಡಿ, ಯದುವೀರ್ ರಾಜಕೀಯಕ್ಕೆ ಹೊಸದಾಗಿ ಬಂದರೂ, ಅಭಿವೃದ್ಧಿ ಪರ ಚಿಂತನೆ ಅವರಿಗೆ ವಂಶ ಪಾರಂಪರ್ಯವಾಗಿ ಬಂದಿರುವುದರಿಂದ ಜನತೆಯ ವಿಶ್ವಾಸಕ್ಕೆ ದ್ರೋಹ ಆಗದ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಇದ್ದರು.








