
ಮಡಿಕೇರಿ ಜು.9 NEWS DESK : ಕೋಮು ದ್ವೇಷದ ಭಾವನೆಗಳು ಸಮಾಜದಲ್ಲಿ ದಳ್ಳುರಿಯಾಗಿ ಕಾಣಿಸಿಕೊಳ್ಳುತ್ತಿರುವ ಈ ದಿನಗಳಲ್ಲಿ, ಶಾಂತಿ ಸಹಬಾಳ್ವೆಯನ್ನು ಸಾರಿದ ಸಾಮ್ರಾಟ ಅಶೋಕ ಪ್ರಸ್ತುತ ಎನಿಸಿಕೊಳ್ಳುತ್ತಾನೆ. ಆತನ ಸಂದೇಶಗಳನ್ನು ಜನಮಾನಸಕ್ಕೆ ತಲುಪಿಸುವ ಪ್ರಯತ್ನವಾಗಿ ಜು.13 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬೆಂಗಳೂರಿನಲ್ಲಿ ‘ಮಹಾನಾಯಕ ಸಾಮ್ರಾಟ್ ಅಶೋಕ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ರಾಜಶೇಖರ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಪುರ ಬುದ್ಧಿಸ್ಟ್ ಅಕಾಡೆಮಿ ಆಫ್ ಪರ್ಫಾಮಿಂಗ್ ಆರ್ಟ್‍ನಿಂದ ಅಂದು ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೆ ಬೆಂಗಳೂರಿನ ವಸಂತ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ಪರಿಕಲ್ಪನೆ ಮತ್ತು ನಿರ್ದೇಶನ ನಾಗಪುರದ ಅಶೋಕ ಜಾಂಬುಲ್ಕರ್ ಹಾಗೂ ನಿರ್ಮಾಣ ನಾಗಪುರದ ಎ.ವಂದನಾ ಜಾಂಬುಲ್ಕರ್ ಅವರದೆಂದು ಮಾಹಿತಿ ನೀಡಿದರು. ‘ಕಳಿಂಗ ಯುದ್ಧ’ದ ಗೆಲುವಿನ ನಂತರ, ಯುದ್ಧದಿಂದ ಉಂಟಾದ ಸಾವು ನೋವುಗಳಿಂದ ಜರ್ಝರಿತನಾದ ಸಾಮ್ರಾಟ್ ಅಶೋಕ ಶಸ್ತ್ರ ತ್ಯಾಗ ಮಾಡಿ ಶಾಂತಿ ಸಹಬಾಳ್ವೆಯನ್ನು ಸಾರುವ ಬುದ್ಧ ಧರ್ಮದತ್ತ ವಾಲುತ್ತಾನೆ. ತನ್ನಿಬ್ಬರು ಮಕ್ಕಳನ್ನು ಬುದ್ಧನ ಸಂದೇಶಗಳನ್ನು ಸಾರಲು ಕಳುಹಿಸಿಕೊಡುವ ‘ಅಶೋಕ’, ಯುದ್ಧ, ಕೋಮುದ್ವೇಷದ ದಳ್ಳುರಿಯ ಈ ದಿನಗಳಲ್ಲಿ ಅತ್ಯಂತ ಪ್ರಸ್ತುತನೆನಿಸಿಕೊಳ್ಳುತ್ತಾನೆ. ಈ ಹಿನ್ನೆಲೆ ಆತನ ಸಂದೇಶಗಳನ್ನು ಸಮಾಜದಲ್ಲಿ ಪಸರಿಸುವ ಪ್ರಯತ್ನವಾಗಿ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆಯೆಂದು ತಿಳಿಸಿದರು. :: ಉದ್ಘಾಟನೆ :: ನಾಟಕ ಆರಂಭಕ್ಕೂ ಮುನ್ನ ಮಧ್ಯಾಹ್ನ 12 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಉದ್ಘಾಟಿಸಲಿದ್ದಾರೆ. ನಾಟಕವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸಭಾಧ್ಯಕ್ಷತೆಯನ್ನು ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ, ಸಚಿವರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆಂದರು. ದಸಂಸ ಜಿಲ್ಲಾ ಸಂಚಾಲಕ ಎಂ.ಎನ್.ರಾಜಪ್ಪ ಮಾತನಾಡಿ, ಸಾಮ್ರಾಟ್ ಅಶೋಕ ನಾಟಕ ಪ್ರದರ್ಶನದಲ್ಲಿ ಜಿಲ್ಲೆಯ 150ಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ದಸಂಸ ಪ್ರಮುಖರು, ಸದಸ್ಯರು ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಎನ್.ಆರ್. ದೇವರಾಜು, ಪ್ರಧಾನ ಕಾರ್ಯದರ್ಶಿ ಎಂ.ಈ.ಪೊನ್ನಪ್ಪ, ಜಿಲ್ಲಾ ಸದಸ್ಯರಾದ ಎನ್.ಸಿ.ಗೋವಿಂದ ರಾಜು, ಕೊಡ್ಲಿಪೇಟೆ ಹೋಬಳಿ ಸಂಚಾಲಕರಾದ ಡಿ.ಬಿ.ಕೇಶವ ಉಪಸ್ಥಿತರಿದ್ದರು.








