
ವಿರಾಜಪೇಟೆ ಜು.12 NEWS DESK : ವಿರಾಜಪೇಟೆ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‍ನ ಕೃಷಿ ಕಾರ್ಯಕ್ರಮದಡಿಯಲ್ಲಿ ಕಳತ್ಮಾಡು ಕಾರ್ಯಕ್ಷೇತ್ರದ ಕಳತ್ಮಾಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು. ಕಳತ್ಮಾಡು ಶಾಲಾ ಮುಖ್ಯ ಶಿಕ್ಷಕ ಭಾಗ್ಯವತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಐ.ಕ್ಯಮ್. ಯುವಸೇನಾ ಅಧ್ಯಕ್ಷ ಎನ್.ಹೆಚ್.ವಿಘ್ನೇಶ ಮಾತನಾಡಿ, ಗಿಡಮರಗಳನ್ನು ಬೆಳೆಸಬೇಕು. ನೆಟ್ಟ ಗಿಡಗಳನ್ನು ಪೋಷಣೆ ಮಾಡಬೇಕು. ಪರಿಸರ ಸಂರಕ್ಷಣೆಯಿಂದ ಶುದ್ಧವಾದ ಗಾಳಿ, ನೀರು ಸಿಗುತ್ತದೆ. ಪರಿಸರದ ರಕ್ಷಣೆ ಮಾಡದೆ ಇದ್ದರೆ ಜೀವ ಸಂಕುಲವೇ ಅವನತಿಯತ್ತ ಸಾಗುತ್ತದೆ ಎಂದರಲ್ಲದೆ ವನಮಹೋತ್ಸವ ಹೇಗೆ ಮಾಡಬೇಕು ಎಂದು ಮಾಹಿತಿ ನೀಡಿದರು. ಎಸ್‍ಡಿಎಂಸಿ ಅಧ್ಯಕ್ಷೆ ಉಷಾ ಮಾತನಾಡಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮಗಳಿಂದ ಮರ ಗಿಡಗಳ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು. ಒಕ್ಕೂಟದ ಅಧ್ಯಕ್ಷರಾದ ಸಿ.ಪಿ. ಡಾಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಎಲೆಗಳನ್ನು ಗುರುತಿಸುವುದರ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಶಾಲಾ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರಾದ ವಸಂತ್, ಶೌರ್ಯ ಘಟಕದ ಮಾಸ್ಟರ್ ತೀರ್ಥ ಕುಮಾರ್ ಶಾಲಾ ಕ್ರೀಡಾ ಸಮಿತಿ ಅಧ್ಯಕ್ಷ ಚಂದ್ರಶೇಖರ, ಶಾಲಾ ಕ್ರೀಡಾ ಸಮಿತಿ ಕಾರ್ಯದರ್ಶಿ ನರು ಸುಬ್ರಮಣಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಶೀಲ, ಅಂಗನವಾಡಿ ಶಿಕ್ಷಕಿ ನೇತ್ರಾವತಿ, ಗೋಣಿಕೊಪ್ಪ ವಲಯದ ಮೇಲ್ವಿಚಾರಕ ನವೀನ್ ಎಂ.ಸಿ, ಸೇವಾ ಪ್ರತಿನಿಧಿ ಜಯಪ್ರಕಾಶ್, ಶೌರ್ಯ ಟೀಮಿನ ಸದಸ್ಯರು, ಸಂಘದ ಸದಸ್ಯರು, ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಇದ್ದರು.








