
ಮಡಿಕೇರಿ ಜು.16 NEWS DESK : ಗ್ರಾಮೀಣ ಪ್ರದೇಶದಲ್ಲಿ ಮನೆಕಟ್ಟಲು ಇರುವ ನಿಯಮವನ್ನು ಸರಳೀಕರಣಗೊಳಿಸಬೇಕೆಂದು ಅರ್ವತ್ತೋಕ್ಲು ಗ್ರಾ.ಪಂ ಮಾಜಿ ಸದಸ್ಯ ಫಿಲಿಪೋಸ್ ಮ್ಯಾಥ್ಯೂ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆಯ ಇಂದಿನ ನಿಯಮಾವಳಿಯಿಂದ ಗ್ರಾಮೀಣ ಪ್ರದೇಶದಲ್ಲಿ ಮನೆಕಟ್ಟಲು ತೊಡಕುಂಟಾಗಿದೆ. ಈಗಿನ ನಿಯಮ ಜನವಿರೋಧಿಯಾಗಿದೆ ಎಂದು ಆರೋಪಿಸಿದರು. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ನಿಯಮಾವಳಿಯ ಪ್ರಕಾರ ಮನೆ ನಿರ್ಮಿಸುವ ಮುನ್ನ ರಸ್ತೆಗಾಗಿ ಎರಡೂ ಬದಿಗಳಲ್ಲಿ ಜಾಗ ಬೀಡಬೇಕು. ನಗರ ಪ್ರದೇಶದಂತೆ ಗ್ರಾಮೀಣ ಭಾಗದಲ್ಲಿ ಎರಡೂ ಬದಿಯಲ್ಲಿ ರಸ್ತೆಗಾಗಿ ಜಾಗ ಬಿಡಲು ಸಾಧ್ಯವಿಲ್ಲ. ಅಲ್ಲದೆ ಚಿಕ್ಕ ಚಿಕ್ಕ ನಿವೇಶಗಳನ್ನಾಗಿ ಭೂ ಪರಿವರ್ತನೆ ಮಾಡಿ ಮಾರಾಟ ಮಾಡುವುದು ಸಾಧ್ಯವಿಲ್ಲ. ನಿವೇಶನ ರಹಿತರು ಮೂಲ ದಾಖಲಾತಿಗಳನ್ನು ಜಿಪಿಎಸ್ ಮಾಡಿ ಆನ್‍ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳು ಗ್ರಾ.ಪಂ ಗಳಿಗೆ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. ಆದ್ದರಿಂದ ಭೂ ಪರಿರ್ತನೆ ಮಾಡಲು ಇರುವ ನಿಯಮವನ್ನು ಸರಳೀಕರಣಗೊಳಿಸಬೇಕು ಮತ್ತು ಜನ ಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಫಿಲಿಪೋಸ್ ಮ್ಯಾಥ್ಯೂ ಮನವಿ ಮಾಡಿದರು.








