
ಮಡಿಕೇರಿ ಜು.23 NEWS DESK : ಗಯಾನ ದೇಶದಲ್ಲಿ ಮೃತಪಟ್ಟ ಅನಿವಾಸಿ ಭಾರತೀಯ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ನಿವಾಸಿ ಪಿ.ಬಿ.ಗಿರೀಶ ಬಾಬು (37) ಅವರ ಮೃತ ದೇಹವನ್ನು ಭಾರತಕ್ಕೆ ತರಲು ಕರ್ನಾಟಕ ಸರ್ಕಾರ ಆರ್ಥಿಕ ನೆರವು ನೀಡಿದೆ. ಬಡ ಕುಟುಂಬದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು 3.60 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಪಿ.ಬಿ.ಗಿರೀಶ ಬಾಬು ಅವರು ದಕ್ಷಿಣ ಅಮೆರಿಕಾದ ಗಯಾನಾ ದೇಶದ ಶೆರಿಫ್ ಜನರಲ್ ಆಸ್ಪತ್ರೆಯಲ್ಲಿ ಸ್ಟಾಪ್‍ನರ್ಸ್ ಆಗಿ ಸುಮಾರು ಎರಡು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. 2025 ರ ಜುಲೈ 3 ರಂದು ಅನಾರೋಗ್ಯ ಕಾರಣದಿಂದ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಪಿ.ಬಿ.ಗಿರೀಶ ಬಾಬು ಅವರು ಬಹು ಅನಿಯಮಿತ ರಕ್ತಸ್ರಾವದ ಹೃದಯಘಾತದಿಂದ 2025 ರ ಜು.14 ರಂದು ಸಾವನ್ನಪ್ಪಿದ್ದಾರೆ. ನಂತರ ಅನಿವಾಸಿ ಭಾರತೀಯ ಸಮಿತಿಯು ಆಸ್ಪತ್ರೆ ಹಾಗೂ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪಿ.ಬಿ.ಗಿರೀಶಬಾಬು ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಕಾರ್ಯವನ್ನು ಪ್ರಾರಂಭಿಸಲಾಯಿತು. ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸುಮಾರು ರೂ.12 ಲಕ್ಷ ಗಳಾಗಬಹುದೆಂದು ರಾಯಭಾರಿ ಕಚೇರಿ ತಿಳಿಸಿತ್ತು. ತಮಗೆ 2 ವರ್ಷದ ಒಬ್ಬ ಮಗನಿದ್ದಾನೆ, ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು, ಸರ್ಕಾರದ ವತಿಯಿಂದ ಸಹಾಯ ಬೇಕು ಎಂದು ಗಿರೀಶ ಬಾಬು ಅವರ ಪತ್ನಿ ಜಾನಕಿ ಕೆ.ಎನ್ ಕಚೇರಿಗೆ ಮನವಿ ಸಲ್ಲಿಸಿದ್ದರು. ಅದರಂತೆ, ಅನಿವಾಸಿ ಭಾರತೀಯ ಸಮಿತಿಯಿಂದ ಪಿ.ಬಿ.ಗಿರೀಶ ಬಾಬು ಅವರ ಮೃತ ದೇಹವನ್ನು ಭಾರತಕ್ಕೆ ತರಲು ತಗಲುವ ವೆಚ್ಚವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಧನ ಸಹಾಯ ಮಾಡಲು ಮುಖ್ಯಮಂತ್ರಿ ಅವರಿಗೆ ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರದ ವತಿಯಿಂದ ರೂ 3.60 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಉಳಿಕೆ ಹಣವನ್ನು ಪಿ.ಬಿ.ಗಿರೀಶ ಬಾಬು ಅವರು ಕೆಲಸ ಮಾಡುತ್ತಿದ್ದ ಶೆರಿಫ್ ಜನರಲ್ ಆಸ್ಪತ್ರೆಯವರು ಭರಿಸಲಿದ್ದಾರೆ. ಗಯಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ನವ ದೆಹಲಿಯಲ್ಲಿರುವ ನಿವಾಸಿ ಆಯುಕ್ತರು ಮೃತದೇಹವನ್ನು ಭಾರತಕ್ಕೆ ತರಲಾಗುವುದು ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಎಚ್.ಎಸ್.ಸತೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಶಾಸಕರಿಗೆ ಮನವಿ* ಮೃತ ಗಿರೀಶ ಬಾಬು ಅವರು ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಳೆಯ ವಿದ್ಯಾರ್ಥಿ. ಈ ಹಿನ್ನೆಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಳೆಯ ಹಿರಿಯ ವಿದ್ಯಾರ್ಥಿಗಳ ‘ಸಮ್ಮಿಲನ’ ತಂಡದ ಪದಾಧಿಕಾರಿಗಳು ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಕೆ.ಎಸ್.ಪೊನ್ನಣ್ಣ ಅವರನ್ನು ಭೇಟಿಮಾಡಿ ಅಗತ್ಯ ನೆರವಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕ ಪೊನ್ನಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚಿಸಿ, ನೆರವಿನ ಆದೇಶ ಹೊರಡಿಸಿದ್ದಾರೆ ಎಂದು ಸಮ್ಮಿಲನ ತಂಡದ ಮಹೇಶ್, ಪ್ರತಾಪ್ ಮಾಚಯ್ಯ, ಅಭಿಲಾಷ್ ಹಾಗೂ ಲೋಕೇಶ್ ತಿಳಿಸಿದ್ದಾರೆ.









