
ಮಡಿಕೇರಿ ಜು.26 NEWS DESK : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಕೊಡಗಿನ ವಿವಿಧೆಡೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಸಂಪಾಜೆ ವ್ಯಾಪ್ತಿಯ ಮೇಕೇರಿ ಗ್ರಾಮದ ಸುಭಾಸ್ ನಗರದ ನಸೀಮಾ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿ ಉಂಟಾಗಿದೆ. ಡಬ್ಬಡ್ಕ ಗ್ರಾಮದ ಮುಕ್ಕಾಟಿ ತಮ್ಮಯ್ಯ ಎಂಬುವರ ಮನೆಯ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶನಿವಾರಸಂತೆ ಹೋಬಳಿ ಕೊರಲಳ್ಳಿ ಗ್ರಾಮದ ಸುಕನ್ಯಾ ಎಂಬುವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಕೆದಮಳ್ಳೂರು ಗ್ರಾಮದ ಚೂರಿಯಾಲದ ದೇವಸ್ಥಾನದ ಮೇಲೆ ಮರ ಬಿದ್ದು ದೇವಸ್ಥಾನವು ಅರ್ಧಕ್ಕಿಂತ ಹೆಚ್ಚು ಹಾನಿಯಾಗಿದ್ದು, ಸ್ಥಳಕ್ಕೆ ವಿರಾಜಪೇಟೆ ತಹಶಿಲ್ದಾರರು ಭೇಟಿ ನೀಡಿ ಪರಿಶೀಸಿದ್ದಾರೆ. ಅಮ್ಮತ್ತಿ ಹೋಬಳಿ ಬಿಳುಗುಂದ ಗ್ರಾಮದ ಹೆಚ್.ಟಿ.ಗಣೇಶ್ ಎಂಬುವರ ವಾಸದ ಮನೆಯ ಹಿಂಬದಿಯ ಗೋಡೆ ಮತ್ತು ಮೇಲ್ಚಾವಣಿ ಮಳೆಯಿಂದ ಕುಸಿದು ಬಿದ್ದು ತೀವ್ರ ಹಾನಿಯಾಗಿದೆ. ಮಡಿಕೇರಿ -ಸೋಮವಾರಪೇಟೆ ಮಾರ್ಗದ ರಸ್ತೆ ಕಾಜೂರು ಬಳಿ ಮರ ರಸ್ತೆಗೆ ಅಡ್ಡ ಬಿದ್ದು ಕೆಲವು ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಾಪೋಕ್ಲು ಹೋಬಳಿ ಎಮ್ಮೆಮಾಡು ಗ್ರಾಮದ ಅಬ್ದುಲ್ ರಹೆಮಾನ್ ಎಂಬುವರ ಮನೆಯ ಹಿಂಭಾಗದಲ್ಲಿ ಮರಬಿದ್ದು ಹಾನಿಯಾಗಿದೆ. ಎಮ್ಮೆಮಾಡು ಗ್ರಾಮದ ಅಬ್ದುಲ್ ಅಫೀಲ್ ಅವರ ವಾಸದ ಮನೆಯ ಪಕ್ಕದಲ್ಲಿ ಬರೆ ಕುಸಿತಗೊಂಡಿದೆ. ದೊಡ್ಡಕೂಡ್ಲಿ ಗ್ರಾಮದ ಕೃಷ್ಣಚಾರ್ಯ ಎಂಬುವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕುಶಾಲನಗರ ತಾಲ್ಲೂಕು ಕೂಡಿಗೆ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟ ಗ್ರಾಮದ ನಿವಾಸಿ ಪಾಂಡುರಂಗ ಎಂಬುವರ ಮನೆಗೆ ಮರ ಬಿದ್ದು ಮನೆಯ 2 ಶೀಟ್ ಹಾಗೂ ಮನೆಗೆ ಹೊಂದಿಕೊಂಡಂತೆ ಇರುವ ಕೊಟ್ಟಿಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.








