
ಮಡಿಕೇರಿ NEWS DESK ಆ.6 : ದಕ್ಷಿಣ ಕೊಡಗಿನ ವಿವಿಧೆಡೆ ನಡೆದಿರುವ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಕುರಿತು ಕ್ಷೇತ್ರದ ಶಾಸಕರು ತನಿಖೆಗೆ ಆದೇಶಿಸಬೇಕು ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ರಸ್ತೆ ಅಭಿವೃದ್ಧಿಯ ಡಾಂಬರು ಕೇವಲ 6 ತಿಂಗಳಿಗೆ ಕಿತ್ತು ಬರುತ್ತಿದೆ. ರಸ್ತೆ ಡಾಂಬರೀಕರಣ ಮಾತ್ರವಲ್ಲದೆ ಗುಂಡಿ ಮುಚ್ಚುವ ಕಾರ್ಯ ಕೂಡ ಕಳಪೆಯಾಗಿದೆ. ಇದು ವ್ಯಾಪಕ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ. ಕುಟ್ಟ – ಶ್ರೀಮಂಗಲ – ಮಡಿಕೇರಿ ರಸ್ತೆ, ಕುಟ್ಟ – ಕಾನೂರು – ಪೊನ್ನಂಪೇಟೆ ರಸ್ತೆ, ಬಿಟ್ಟಂಗಾಲ – ಬಾಳುಗೋಡು – ಮಾಕುಟ್ಟ ರಸ್ತೆ, ಹೀಗೆ ಅನೇಕ ರಸ್ತೆಗಳಿವೆ. ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಅಗತ್ಯ ಅನುದಾನ ದೊರೆಯುತ್ತಿಲ್ಲ, ಬಂದಿರುವ ಅಲ್ಪ ಅನುದಾನವನ್ನು ಕೂಡ ಸದುಪಯೋಗ ಪಡಿಸದೆ ಕಳಪೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲಾಗದೆ ವಾಹನ ಚಾಲಕರು ಸರಕಾರ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ್ದಾರೆ. ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ವಿರೋಧ ಪಕ್ಷ ಬಿಜೆಪಿ ಧ್ವನಿ ಎತ್ತಿದರೆ ಆಡಳಿತ ಪಕ್ಷ ಕಾಂಗ್ರೆಸ್ ನ ಹಿಂಬಾಲಕರು ಅಭಿವೃದ್ಧಿ ಕಾರ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ನೀಡಿ ಜನರ ಹಾದಿ ತಪ್ಪಿಸುತ್ತಿದ್ದಾರೆ. ಪ್ರಶ್ನೆ ಮಾಡುವ ವಿರೋಧ ಪಕ್ಷದ ಹಕ್ಕನ್ನು ಕಸಿದುಕೊಳ್ಳುವ ಮತ್ತು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಶ್ನೆ ಮಾಡುವವರಿಗೆ ಧಮ್ಕಿ ಹಾಕುವ ಕೆಲಸವನ್ನು ಕೂಡ ಕೆಲವು ಕಡೆಗಳಲ್ಲಿ ಮಾಡಿದ್ದು, ಈ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ ಎಂದು ಆರೋಪಿಸಿರುವ ರಾಕೇಶ್ ದೇವಯ್ಯ ಆಡಳಿತ ಪಕ್ಷದ ಮಂದಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರೆತಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ಪ್ರಶ್ನೆಯನ್ನು ಕೇವಲ ರಾಜಕೀಯ ದೃಷ್ಟಿಕೋನದಿಂದ ನೋಡದೆ ಆಡಳಿತದ ಸವಾಲುಗಳಾಗಿ ಪರಿಗಣಿಸಿ ಮತ ನೀಡಿದ ಜನರಿಗಾಗಿ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಾಮಾಣಿಕತೆ ತೋರಲಿ ಎಂದು ಒತ್ತಾಯಿಸಿದ್ದಾರೆ. ಕಳಪೆ ಕಾಮಗಾರಿಗಳಿಗೆ ಅವಕಾಶ ನೀಡುವುದಿಲ್ಲವೆಂದು ಆರಂಭದಿoದಲೂ ಘೋಷಿಸುತ್ತಲೇ ಬಂದಿರುವ ಶಾಸಕರು ತಕ್ಷಣ ದಕ್ಷಿಣ ಕೊಡಗಿನ ಹದಗೆಟ್ಟ ರಸ್ತೆಗಳನ್ನು ಖುದ್ದು ಪರಿಶೀಲಿಸಬೇಕು. ಕಳಪೆ ಕಾಮಗಾರಿ ಕುರಿತು ಸಂಬoಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಯಾವುದೇ ಕಾರಣಕ್ಕೂ ಬಿಲ್ ಹಣ ಪಾವತಿ ಮಾಡಬಾರದು ಎಂದು ರಾಕೇಶ್ ದೇವಯ್ಯ ಆಗ್ರಹಿಸಿದ್ದಾರೆ. ಕಳಪೆ ಕಾಮಗಾರಿಯಾಗಿರುವ ರಸ್ತೆಗಳ ಬಿಲ್ ಪಾವತಿಯಾಗಿಲ್ಲ ಎಂಬ ಹಾರಿಕೆಯ ಉತ್ತರಕ್ಕೆ ಪ್ರಾಮಾಣಿಕತೆ ಸೀಮಿತವಾಗದಿರಲಿ. ಈಗ ಬಿಲ್ ಪಾವತಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಬಿಲ್ ಪಾವತಿ ಮಾಡುತ್ತಾರೆ. ಆಗ ರಸ್ತೆ ಮಾಡಿ 3 ವರ್ಷ ಕಳೆದಿದೆ, ನಾವು ಏನೂ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ಅಧಿಕಾರಿಗಳಿಂದ ಬಂದರೂ ಆಶ್ಚರ್ಯವಿಲ್ಲ ಎಂದು ತಿಳಿಸಿದ್ದಾರೆ.










