
ಮಡಿಕೇರಿ NEWS DESK ಜು.30 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅನಧಿಕೃತವಾಗಿ, ಕಾನೂನು ಬಾಹಿರವಾಗಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾಗಿರುವುದು ಬಹಳ ಆತಂಕಕಾರಿಯದ ಬೆಳವಣಿಗೆಯಾಗಿದೆ. ಸುಮಾರು ರೂ.390 ಕೋಟಿಗಿಂತಲೂ ಅಧಿಕ ಮೌಲ್ಯದ ಡ್ರಗ್ಸ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಪೊಲೀಸರು ಈ ಪ್ರಕರಣವನ್ನು ಪತ್ತೆ ಮಾಡಿರುವುದು ರಾಜ್ಯದ ಪೊಲೀಸ್ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಹ ಸಂಚಾಲಕ ಮಹೇಶ್ ಕಡಗದಾಳು, ಮೈಸೂರು ಮಹಾನಗರ ಜಿಲ್ಲಾ ಸಂಚಾಲಕ ರಂಗಸ್ವಾಮಿ ಹಾಗೂ ಮೈಸೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಅನೀಶ್ ಪಿರಿಯಾಪಟ್ಟಣ ಆರೋಪಿಸಿದ್ದಾರೆ. ಸ್ವತ: ರಾಜ್ಯದ ಗೃಹ ಸಚಿವರು ಈ ಬಗ್ಗೆ ಮಾತನಾಡಿದ್ದು ರಾಜ್ಯ ಪೋಲಿಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ತಯಾರಿಕಾ ಘಟಕ ಅದರಲ್ಲೂ ಕಾನೂನು ಬಾಹಿರವಾಗಿ ನಡೆಯುತ್ತಿರುವುದರ ಬಗ್ಗೆ ಪೋಲಿಸ್ ಇಲಾಖೆಯ ಗುಪ್ತಚರ ಇಲಾಖೆಯ ಗಮನಕ್ಕೆ ಬಾರದಿರುವುದು ವಿಪರ್ಯಾಸ. ರಾಜ್ಯದಲ್ಲಿ ವ್ಯಾಪಕವಾಗಿ ಡ್ರಗ್ಸ್ ಮಾರಾಟವಾಗುತ್ತಿರುವುದು ಆತಂಕವನ್ನು ಉಂಟು ಮಾಡುತ್ತಿದೆ. ಈಗಾಗಲೇ ಕೇರಳದಲ್ಲಿ ಇದರ ಜಾಲ ಬೇರೂರಿದೆ. ಹದಿಹರೆಯದ ಯುವಕ ಯುವತಿಯರನ್ನು ವ್ಯಸನಿಗಳನ್ನಾಗಿ ಮಾಡುವುದರ ಮೂಲಕ ಅವರ ಮಾನಸಿಕ ಸ್ಥೆರ್ಯವನ್ನು ಕುಗ್ಗಿಸುವ ಪ್ರಯತ್ನವು ನಡೆದಿದೆ. ಭಾರತದ ಭವಿಷ್ಯವನ್ನು ರೂಪಿಸುವ ಯುವ ಸಮುದಾಯದಲ್ಲಿ ಈ ರೀತಿಯ ದುಶ್ಚಟವನ್ನು ಹೇರುವ ಕಾರ್ಯದಲ್ಲಿ ದೇಶದ್ರೋಹಿ ಸಂಘಟನೆಗಳು ತೊಡಗಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್ ಪ್ರಕರಣದ ಕುರಿತು ಕೇಂದ್ರ ಗ್ರಹ ಇಲಾಖೆ ಸಮಗ್ರ ತನಿಖೆಯನ್ನು ನಡೆಸಬೇಕು. ಈ ಡ್ರಗ್ಸ್ ತಯಾರಿಕಾ ಘಟಕದ ಹಿಂದೆ ಯಾರೆಲ್ಲ ಶಾಮಿಲಾಗಿದ್ದಾರೆ ಅವರೆಲ್ಲರನ್ನು ಕಾನೂನಿನ ಅಡಿಯಲ್ಲಿ ಬಂಧಿಸಿ ಶಿಕ್ಷಿಸಬೇಕು. ಇಲ್ಲಿ ತಯಾರಾದ ಡ್ರಗ್ಸ್ ಎಲ್ಲೆಲ್ಲಿಗೆ ಸರಬರಾಜು ಆಗುತ್ತಿತ್ತು ಮತ್ತು ಯಾರು ಸರಬರಾಜು ಮಾಡುತ್ತಿದ್ದರು ಎನ್ನುವ ಮಾಹಿತಿಯನ್ನು ಸಂಗ್ರಹಿಸಬೇಕು. ಇದರ ಹಿಂದೆ ಯಾವುದಾದರೂ ಮತೀಯ ಸಂಘಟನೆಯ ಪಾತ್ರ ಇದೆಯೇ ಎನ್ನುವ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಸ್ಥಳೀಯರು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ರಾಷ್ಟ್ರದ ಆಂತರಿಕ ಸುರಕ್ಷತೆಗೆ ಈ ಪ್ರಕರಣ ಹೆಚ್ಚು ಆತಂಕಕಾರಿಯಾಗಿದ್ದು, ಕೇಂದ್ರ ಗೃಹ ಇಲಾಖೆ ಮಧ್ಯಪ್ರವೇಶಿಸಿ ಸಮಗ್ರ ತನಿಖೆ ನಡೆಸಬೇಕೆಂದು ಮಹೇಶ್ ಕಡಗದಾಳು, ರಂಗಸ್ವಾಮಿ ಹಾಗೂ ಅನೀಶ್ ಪಿರಿಯಾಪಟ್ಟಣ ಒತ್ತಾಯಿಸಿದ್ದಾರೆ.








