
ಮಡಿಕೇರಿ NEWS DESK ಆ.6 : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ಕರ್ನಾಟಕ ರಾಜ್ಯ ಸರಕಾರ 2023 ರಲ್ಲಿ “ಮೀಸಲಾತಿ”ಗೆ ಸಂಬoಧಿಸಿದoತೆ ಜಾರಿಗೆ ತಂದಿರುವ ಕಾನೂನನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲಿ ಎಂದು ಕರ್ನಾಟಕ ರಾಜ್ಯ ಸಮಾನ ಮನಸ್ಕರ ವೇದಿಕೆಯ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೀಸಲಾತಿ ಎನ್ನುವುದು “ಯಾರಪ್ಪನ ಗಂಟು ಅಲ್ಲ”, ಭಿಕ್ಷೆಯೂ ಅಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ ಹಕ್ಕಾಗಿದೆ. ಕೇಂದ್ರದ ಮೋದಿ ನೇತೃತ್ವದ ಕೇಂದ್ರ ಸರಕಾರ ಪರಿಶಿಷ್ಟ ಜಾತಿ-ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಮುಂದಾಗಬೇಕು. ರಾಜ್ಯದ 28 ಸಂಸದರು 224 ಶಾಸಕರು ಹಾಗೂ ರಾಜ್ಯಸಭಾ ಸದಸ್ಯರು ಮೀಸಲಾತಿ ಪರ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು. ರಾಷ್ಟçದ ಒಟ್ಟು ಜನಸಂಖ್ಯೆ ಶೇ.7 ರಷ್ಟಿರುವ ಮೇಲ್ವರ್ಗದ ಮಂದಿಗೆ ಅಗತ್ಯ ಮೀಸಲಾತಿ ಸೌಲಭ್ಯಗಳನ್ನು ಯಾವುದೇ ಸದ್ದುಗದ್ದಲವಿಲ್ಲದೆ ಒದಗಿಸುವ ಪ್ರಧಾನಿ ಪರಿಶಿಷ್ಟರು, ಒಬಿಸಿ ಮಂದಿಯ ಮೀಸಲಾತಿಯ ಹಕ್ಕುಗಳನ್ನು ಸಂವಿಧಾನಬದ್ಧವಾಗಿ ಒದಗಿಸಲು ಮುಂದಾಗಬೇಕು. ಸಂವಿಧಾನದ ಒಂಭತ್ತನೆ ಪರಿಚ್ಛೇದಕ್ಕೆ ರಾಜ್ಯದ ಮೀಸಲಾತಿ ಕಾನೂನು ಒಳಪಡದೆ ಇರುವ ಹಿನ್ನೆಲೆಯಲ್ಲಿ ರಾಜ್ಯದ ಪರಿಶಿಷ್ಟ ಜಾತಿಯವರು ಶೇ.17ರ ಮೀಸಲಾತಿಗೆ ಬದಲಾಗಿ ಶೇ.15 ರಷ್ಟನ್ನೆ ಪಡೆಯುವಂತಾಗಿದೆ. ಪರಿಶಿಷ್ಟ ಪಂಗಡ ಸಮುದಾಯದವರು ಶೇ.7ರ ಮೀಸಲಾತಿಗೆ ಬದಲಾಗಿ ಶೇ.3 ಮೀಸಲಾತಿಯನ್ನಷ್ಟೆ ಪಡೆಯುತ್ತಿದ್ದಾರೆ. ಒಬಿಸಿ ವರ್ಗಕ್ಕೆ ಸೇರಿದವರಿಗೆ ಶೇ.32 ಮಿಸಲಾತಿಯ ಸೌಲಭ್ಯವಷ್ಟೆ ದೊರಕುತ್ತಿದೆ. ಇದು ಸಾಮಾಜಿಕ ನ್ಯಾಯಕ್ಕೆ ಮಾಡುತ್ತಿರುವ ಅಪಚಾರವಾಗಿದೆ ಎಂದು ವಿ.ಎಸ್.ಉಗ್ರಪ್ಪ ತಿಳಿಸಿದರು. *ನಿಯೋಗ ತೆರಳಿ* ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸರ್ವಪಕ್ಷಗಳ ನಿಯೋಗದೊಂದಿಗೆ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ, ರಾಜ್ಯಕ್ಕೆ ದೊರಕಬೇಕಾದ ಮೀಸಲಾತಿಯ ಸೌಲಭ್ಯಗಳ ಬಗ್ಗೆ ಮನದಟ್ಟು ಮಾಡಿಕೊಡಬೇಕು. ಮೀಸಲಾತಿಯ ಕಾನೂನನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ-ಪಂಗಡ ಮತ್ತು ಒಬಿಸಿ ವರ್ಗಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರ ಅಗತ್ಯ ಹಣಕಾಸಿನ ನೆರವನ್ನು ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ಒದಗಿಸಲು ಮುಂದಾಗಬೇಕು. ಪ್ರಸ್ತುತ ಸಂವಿಧಾನದ ಪರಿಚ್ಛೇದಕ್ಕೆ ರಾಜ್ಯದ ಮೀಸಲಾತಿಯ ಕಾನೂನು ಸೇರದೆ ಇರುವ ಹಿನ್ನೆಲೆಯಲ್ಲಿ ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿಗಳನ್ನು ಸಮುದಾಯದ ಮಂದಿ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆಯೆಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಪರಿಶಿಷ್ಟರು, ಆದಿವಾಸಿಗಳು, ಇತರೆ ಹಿಂದುಳಿದ ವರ್ಗಗಳು ಮೀಸಲಾತಿಯ ನೈಜ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದ ಸಂಸದರು, ಶಾಸಕರು ಈ ಬಗ್ಗೆ ಬಾಯಿ ಬಿಡುತ್ತಿಲ್ಲ, ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಕೂಡ ಸಂಸತ್ ನಲ್ಲಿ ಮಾತನಾಡುತ್ತಿಲ್ಲ ಎಂದು ಟೀಕಿಸಿದರು. ರಾಜ್ಯದಲ್ಲಿ ಶೇ.17.1ರಷ್ಟು ಸುಮಾರು 1.25 ಕೋಟಿಯಷ್ಟು ಪರಿಶಿಷ್ಟ ಜಾತಿ ಸಮುದಾಯದವರಿದ್ದಾರೆ. ಪರಿಶಿಷ್ಟ ಜಾತಿ ಮೀಸಲಾತಿಯಡಿ 101 ಜಾತಿಗಳಿವೆ. ಅದೇ ರೀತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಶೇ.7 ರಷ್ಟು ಸುಮಾರು 50 ಲಕ್ಷ ಮಂದಿ ಇದ್ದಾರೆ. ಶೇ.42 ರಷ್ಟು ಒಬಿಸಿ ಸುಮಾರು 2.90 ಕೋಟಿ ಮಂದಿ ಸೇರಿದಂತೆ ಒಟ್ಟಾಗಿ ಮೀಸಲಾತಿಯಡಿ 4.50 ಕೋಟಿ ಜನರು ಬರುತ್ತಾರೆ. ಈ ಜನಸಂಖ್ಯೆಗೆ ಅನುಗುಣವಾದ ಮೀಸಲಾತಿ ಸೌಲಭ್ಯವನ್ನು ಒದಗಿಸಬೇಕೆಂದು ವಿ.ಎಸ್.ಉಗ್ರಪ್ಪ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಾನ ಮನಸ್ಕರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಎಂ.ನರಸಿoಹಯ್ಯ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಜಯಶ್ರೀ, ಕೊಡಗು ಜಿಲ್ಲಾ ವಾಲ್ಮೀಕಿ ಮತ್ತು ನಾಯಕ್ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಅಶೋಕ್, ವೇದಿಕೆಯ ಪ್ರಮುಖರಾದ ಎಸ್.ಸಿದ್ದಪ್ಪಯ್ಯ ಹಾಗೂ ಈ.ರಾಜಪ್ಪ ಉಪಸ್ಥಿತರಿದ್ದರು.









