
ಮಡಿಕೇರಿ ಆ.4 NEWS DESK : ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಕುದ್ರೆಪಾಯ ಗ್ರಾಮ ಮಟ್ಟದ ಉಪ ಸಮಿತಿಯನ್ನು ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಕೆ.ಜೆ.ಶಶಿಕಾಂತ್ ಹಾಗೂ ಕಾರ್ಯದರ್ಶಿಯಾಗಿ ಸತೀಶ ಪಿ.ಆರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮರಾಠ, ಮರಾಟಿ ಸಮಾಜ ಸೇವಾ ಸಂಘದ ಕುದ್ರೆಪಾಯ ಗ್ರಾಮ ಮಟ್ಟದ ಸಭೆ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಶ್ರೀ ಮಹಾವಿಷ್ಣು ದೈವಸ್ಥಾನದ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಯಶೋಧ ಪಿ.ಎಂ, ಉಪ ಕಾರ್ಯದರ್ಶಿಯಾಗಿ ಪ್ರವೀಣ ವಿ.ಆರ್, ಕೋಶಾಧಿಕಾರಿಯಾಗಿ ರಂಜಿತ್ ಕೆ.ಎಂ. ಸಂಚಾಲಕರಾಗಿ ವಿಷ್ಣು ನಾಯ್ಕ್ ಟಿ, ಭಾರತಿ, ಸರಸ್ವತಿ ಮಾಪ್ಲೆಕಜೆ, ಸಲಹೆಗಾರರಾಗಿ ವಸಂತ ಕೆ.ಸಿ, ಸಮಿತಿ ಸದಸ್ಯರಾಗಿ ಸತೀಶ್, ರಾಜೇಶ್ವರ ವಿ.ಸಿ, ಕುಶಾಲಪ್ಪ ಬಳ್ಳಿಕೋಡಿ, ವಿಶ್ವನಾಥ ಚಳ್ಳಂಗಾಯ, ಹೂವಯ್ಯ ಕೆರೆಮೂಲೆ ಅವಿರೋಧವಾಗಿ ಆಯ್ಕೆಯಾದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರ ಎಂ.ಎಂ ಅವರು ನೂತನ ಪದಾಧಿಕಾರಿಗಳು ಸಂಘಟಿತರಾಗಿ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಬೇಕು ಮತ್ತು ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬೇಕು. ಪ್ರತಿ ತಿಂಗಳು ಮಾಸಿಕ ಸಭೆಯನ್ನು ನಡೆಸಬೇಕು, ಯಾವುದೇ ವಿಚಾರಗಳನ್ನು ಜಿಲ್ಲಾ ಸಂಘದ ಮಾಸಿಕ ಸಭೆಯಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು. ಗ್ರಾಮದಲ್ಲಿ ಮದ್ಯಪಾನ ನಿμÉೀಧಕ್ಕೆ ಗ್ರಾಮಸ್ಥರು ಹಾಗೂ ಮಹಿಳೆಯರು ಪಣತೊಟ್ಟು ಜಾಗೃತಿ ಮೂಡಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಜೀವನದ ಪಾಠವನ್ನು ಕೂಡ ಹೇಳಿಕೊಡಬೇಕು ಎಂದು ಕಿವಿಮಾತು ಹೇಳಿದರು. ಜಿಲ್ಲಾ ಸಂಘದಿಂದ ಅಜೀವ ಸದಸ್ಯರಿಗೆ ಹಾಗೂ ಅವರ ಕುಟುಂಬದವರಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರೋಗ್ಯ ನಿಧಿ, ಪ್ರಾಕೃತಿಕ ವಿಕೋಪದಿಂದ ತತ್ತರಿಸಿದವರಿಗೆ ಪ್ರಕೃತಿ ವಿಕೋಪ ನಿಧಿ ಹಾಗೂ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ರೂ.5 ಸಾವಿರ ಮರಣ ನಿಧಿಯನ್ನು ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಸಂಘದ ಎಲ್ಲಾ ಸದಸ್ಯರು ಪಡೆದುಕೊಳ್ಳಲು ಸಂಘದಲ್ಲಿ ಅಜೀವ ಸದಸ್ಯತ್ವವನ್ನು ಪಡೆದುಕೊಳ್ಳಬೇಕು. ಜಿಲ್ಲಾ ಸಂಘದಲ್ಲಿ ರೂ.1 ಸಾವಿರ ಹಾಗೂ ಎರಡು ಭಾವಚಿತ್ರಗಳನ್ನು ನೀಡಿ ಅಜೀವ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಪರಮೇಶ್ವರ ಎಂ.ಎಂ ತಿಳಿಸಿದರು. ಸಮಾಜದ ಬಂಧುಗಳು ಯಾವುದೇ ಸಮಸ್ಯೆಗಳಿದ್ದರೂ ಉಪಸಮಿತಿಯ ಮೂಲಕ ಜಿಲ್ಲಾ ಸಂಘಕ್ಕೆ ತಿಳಿಸಿ ಪರಿಹಾರ ಕಂಡುಕೊಳ್ಳಬೇಕೆಂದು ಮನವಿ ಮಾಡಿದರು. ಸಂಚಾಲಕ ವಿಷ್ಣು ನಾಯ್ಕ್ ಟಿ. ಮಾತನಾಡಿ ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭ ಮರಾಟಿ (ದ.ಕ) ಎಂದು ನೀಡುವುದರಿಂದ ಸರ್ಕಾರದ ಸೌಲಭ್ಯದಿಂದ ನಾವು ವಂಚನೆಗೊಳಗಾಗುತ್ತೇವೆ, ಆದ್ದರಿಂದ ಇದನ್ನು ಸರಿ ಪಡಿಸಿಕೊಳ್ಳಬೇಕಾಗಿದೆ ಎಂದು ಸಭೆಯ ಗಮನ ಸೆಳೆದರು. ಜಿಲ್ಲಾ ಸಂಘದ ಕಾರ್ಯದರ್ಶಿ ಹೂವಮ್ಮ ಹಾಗೂ ಕುದ್ರೆಪಾಯ ಉಪಸಮಿತಿಯ ನೂತನ ಅಧ್ಯಕ್ಷ ಕೆ.ಜೆ.ಶಶಿಕಾಂತ್ ಅವರು ಮಾತನಾಡಿ ನೂತನವಾಗಿ ರಚನೆಗೊಂಡ ಸಮಿತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಭರತ್ ಕೊಚ್ಚಿ ಪ್ರಾರ್ಥಿಸಿ, ಟೀನಾ ಕುಮಾರ ಕೆ.ಬಿ ಸ್ವಾಗತಿಸಿ, ಅಂಗನವಾಡಿ ಶಿಕ್ಷಕಿ ಲೀಲಾವತಿ ವಂದಿಸಿದರು. ಆಟಿ 18ರ ಪ್ರಯುಕ್ತ ಆಟಿ ಪಾಯಸ ಮತ್ತು ಖಾದ್ಯವನ್ನು ಸವಿಯಲಾಯಿತು.








