
ವಿರಾಜಪೇಟೆ, ಆ.6 NEWS DESK : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಘಟಕದ ಪದಗ್ರಹಣ ಕಾರ್ಯಕ್ರಮವು ಆ.8 ರಂದು ನಡೆಯಲಿದೆ. ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮಡಿಕೇರಿ ಜಿಲ್ಲಾ ಖಜಾನೆ ಉಪ ನಿರ್ದೇಶಕರಾದ ಡಾ. ರಘುನಾಥ ಬಿ.ಎನ್. ಉದ್ಘಾಟಿಸಲಿದ್ದು, ರಾಜ್ಯ ಉಪಾಧ್ಯಕ್ಷ ಗಣೇಶ್ ನಿಲುವಾಗಿಲು ಪ್ರಾಸ್ತಾವಿಕ ನುಡಿ ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಘಟಕದ ಮಹಾಪೋಷಕರಾದ ಮಲ್ಲಿಕಾರ್ಜುನ ತೊದಲಬಾಗಿ, ಗೌರವಾಧ್ಯಕ್ಷೆ ಎಲ್.ಐ. ಲಕ್ಕಮ್ಮನವರ್, ರಾಜ್ಯಾಧ್ಯಕ್ಷೆ ರಮಾ ಆರ್., ಪ್ರಧಾನ ಕಾರ್ಯದರ್ಶಿ ಪರ್ವೀನ್ ಬಾನು, ಹಿರಿಯ ಉಪಾಧ್ಯಕ್ಷ ಪ್ರೊ. ಬಸವರಾಜು ಕೆ., ಶಾಮಸುಂದರ್ ಸೇರಿದಂತೆ ರಾಜ್ಯ ಹಾಗೂ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷೆ ಕಮಲಮ್ಮ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತ್ಯ, ಕಲೆ, ಶಿಕ್ಷಣ, ಕ್ರೀಡೆ, ಮಾಧ್ಯಮ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರಿಗೆ ‘ಆದರ್ಶ ಸೇವಾ ರತ್ನ’ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಸಮ್ಮಿಲನದಲ್ಲಿ ಸಂಗೀತ, ನೃತ್ಯ, ಗೀತಗಾಯನ, ಕವಿಗೋಷ್ಠಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿವೆ ಎಂದು ರಾಜ್ಯ ಉಪಾಧ್ಯಕ್ಷ ಗಣೇಶ್ ನಿಲುವಾಗಿಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









