
ಸುಂಟಿಕೊಪ್ಪ ಆ.21 NEWS DESK : ಕೊಡಗು ಜಿಲ್ಲಾ ಲೀಡ್ ಬ್ಯಾಂಕ್, ವಾಲ್ನೂರು ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ವಾಲ್ನೂರು ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಕೇಂದ್ರ ಸರ್ಕಾರದ ಆದೇಶದಂತೆ ವಾಲ್ನೂರು ಗ್ರಾಮದಲ್ಲಿ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಲೀಡ್ ಬ್ಯಾಂಕ್ ನ ವ್ಯವಸ್ಥಾಪಕ ಗಂಗಾಧರ್ ನಾಯಕ್, ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ಸಲಹೆ ನೀಡಿದರಲ್ಲದೇ, ಮುಖ್ಯವಾಗಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸುರಕ್ಷ ಭೀಮಾ ಯೋಜನೆಯು ಒಂದು ಅಪಘಾತ ವಿಮೆಯಾಗಿದ್ದು, ವಾರ್ಷಿಕ 20ರೂ ಗಳನ್ನು ಪಾವತಿಸಿ ಈ ಯೋಜನೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ ರೂ.2 ಲಕ್ಷಗಳವರೆಗಿನ ವಿಮಾ ಮೊತ್ತವು ಗ್ರಾಹಕರ ನಾಮಿನಿಗೆ ಸಿಗುವುದಾಗಿ ಮಾಹಿತಿ ನೀಡಿದರು. ಹಾಗೂ ವಾರ್ಷಿಕವಾಗಿ ರೂ436ಗಳನ್ನು ಪಾವತಿಸಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆಯನ್ನು ಮಾಡಿಸಿಕೊಂಡಲ್ಲಿ ಯಾವುದೇ ರೀತಿಯಲ್ಲಿ ಮರಣಹೊಂದಿದರೆ ಅಂತವರ ನಾಮಿನಿಗೂ ಕೂಡ ರೂ.2 ಲಕ್ಷ ಗಳ ವಿಮಾ ಮೊತ್ತ ಸಿಗಲಿದೆ.ಎರಡನ್ನೂ ಮಾಡಿಸಿಕೊಂಡಲ್ಲಿ ರೂ.4 ಲಕ್ಷಗಳ ವರೆಗಿನ ವಿಮಾಮೊತ್ತ ಸಿಗುವುದಾಗಿ ಮಾಹಿತಿ ನೀಡಿದರು. ಅಲ್ಲದೇ, 60 ವಯಸ್ಸು ಆದ ನಂತರದಲ್ಲಿ ಪಿಂಚಣಿ ರೂಪದಲ್ಲಿ ರೂ.1000 ದಿಂದ 5 ಸಾವಿರ ಗಳವರೆಗಿನ ಪಿಂಚಣಿ ಹಣ ಸಿಗಬೇಕಾದರೆ ತಕ್ಷಣವೇ ಅಟಲ್ ಪಿಂಚಣಿ ಯೋಜನೆಯನ್ನು ಮಾಡಿಸುವಂತೆ ತಿಳಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿ ಅಲೋಕ್ ಸೀನ್ಹ ಅವರು ಮಾತನಾಡಿ, ಪ್ರತಿಯೊಬ್ಬರು ರೀ ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕು. ಎಲ್ಲರೂ ನಿಮ್ಮ ಖಾತೆ ಇರುವ ಬ್ಯಾಂಕ್ ಗಳಿಗೆ ತೆರಳಿ ತಮ್ಮ ಗುರುತಿನ ಚೀಟಿ, ಆಧಾರ್ ಕಾರ್ಡನ್ನು ನೀಡಿ ಮರು ಕೆವೈಸಿ ಮಾಡಿಸುವಂತೆ ಗ್ರಾಹಕರಿಗೆ ಸಲಹೆ ನೀಡಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇವರ ಸಹಯೋಗದಲ್ಲಿ ನಬಾರ್ಡ್ ನ ಆರ್ಥಿಕ ನೆರವಿನೊಂದಿಗೆ ಕೊಡಗು ಜಿಲ್ಲೆಯಲ್ಲಿ ಅವಾರ್ಡ್ ಸಂಸ್ಥೆಯು ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪ್ರತೀ ತಾಲೂಕುಗಳಲ್ಲಿ ಮಾಡುತ್ತಿದ್ದು ಇದರ ಮುಖ್ಯ ಉದ್ದೇಶವೂ ಕೂಡ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದು, ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಡಿಜಿಟಲ್ ಜಮಾಗಳ ಬಗ್ಗೆ ಮಾಹಿತಿ ನೀಡುವುದೇ ಆಗಿದೆ ಎಂದು ಆರ್ಥಿಕ ಸಮಾಲೋಚಕರಾದ ನಬಿ ಅವರು ತಿಳಿಸಿದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮನು ಮಹೇಶ್, ಗ್ರಾಮ ಪಂಚಾಯಿತಿ ಪಿಡಿಒ ಮೇದಪ್ಪ ಮಾತನಾಡಿದರು. ಗ್ರಾಮಪಂಚಾಯತಿ ಅಧ್ಯಕ್ಷ ಮತಿ ಮಂಜುಳ, ಉಪಾಧ್ಯಕ್ಷ ಮನು ಮಹೇಶ್, ಲೀಡ್ ಬ್ಯಾಂಕ್ ನ ವ್ಯವಸ್ಥಾಪಕ ಗಂಗಾಧರ್ ನಾಯ್ಕ ಹಾಗೂ ರಿಸರ್ವ್ ಬ್ಯಾಂಕಿನ ಅಧಿಕಾರಿ ಅಲೋಕ್ ಸೀನ್ಹ ಮತ್ತು ಯೂನಿಯನ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕಿ ಪಬಿತ ಹಾಗೂ ಬ್ಯಾಂಕ್ ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.









