
ಮಡಿಕೇರಿ ಆ.22 NEWS DESK : ತಾರ್ಬ್ಸ್ ನ ಸಂತ ಜೋಸೆಫರ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆಯನ್ನು ಮಡಿಕೇರಿಯ ಸಂತ ಜೋಸೆಫರ ಕಾನ್ವೆಂಟ್ ವಿದ್ಯಾ ಸಂಸ್ಥೆಯಲ್ಲಿ ಆಚರಿಸಲಾಯಿತು. ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿಭಾಗಗಳ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮುದಾಯ ಸಂಸ್ಥೆಗೆ ಅಡಿಪಾಯ ಹಾಕಿದ ದಿನವನ್ನು ಅರ್ಥಪೂರ್ಣ ಆಚರಣೆಯ ಮೂಲಕ ಸ್ಮರಿಸಿದರು. ಮಡಿಕೇರಿಯ ಜೋಸೆಫ್ಸ್ ಸಂಸ್ಥೆಯ ಸುಪೀರಿಯರ್ ಆಗಿರುವ ಸಿಸ್ಟರ್ ಮರ್ಸಿ ಜೇಕಬ್ ಮಾತನಾಡಿ 1843 ರ ಆ.14ರಂದು ಫ್ರಾನ್ಸ್ ದೇಶದ ಕಾಂತಾವ್ಸ್ ನ ಟಾರ್ಬ್ಸ್ ಎಂಬಲ್ಲಿ ಆರು ಮಂದಿ ಕನ್ಯೆಯರಿಂದ ಆರಂಭಗೊಂಡ ಸಂತ ಜೋಸೆಫರ ಸಂಸ್ಥೆಯು ಆರೋಗ್ಯ, ಶಿಕ್ಷಣ, ಸಮಾಜ ಸೇವೆ ಮೊದಲಾದ ಸಮಾಜಮುಖಿ ಸೇವೆಗಳಲ್ಲಿ ನಿರತವಾಗಿದ್ದು, ತನ್ನ ಸೇವಾ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತ, ಇಂದು ಬೇರೆ ಬೇರೆ ದೇಶಗಳಲ್ಲಿ ತನ್ನ ಶಾಖೆಗಳನ್ನು ತೆರೆದು ಕಾರ್ಯನಿರತವಾಗಿವೆ. ಶಿಕ್ಷಣ, ಆರೋಗ್ಯವನ್ನೂ ಒಳಗೊಂಡಂತೆ ಹತ್ತು ಹಲವು ಸಮಾಜಮುಖಿ ಕಾರ್ಯಗಳಲ್ಲಿ ಸಂಸ್ಥೆಗಳ ಸಿಸ್ಟರ್ಸ್ ಗಳು ತೊಡಗಿಕೊಂಡಿದ್ದಾರೆ ಎಂದರು. ಸಿಸ್ಟರ್ಸ್ ಗಳ ನಿಸ್ವಾರ್ಥ ಸೇವಾ ಸಾಧನೆಗಳನ್ನು ಮಕ್ಕಳು ಕಿರು ರೂಪಕದ ಮೂಲಕ ಅಭಿನಯಿಸಿದರು. ಸಂಸ್ಥಾಪನಾ ಗೀತೆಗಳನ್ನು ಹಾಡಿದರು. ಸಂತ ಜೋಸೆಫರ ಸಂಸ್ಥೆಯ ಸಂಚಾಲಕರಾದ ಸಿಸ್ಟರ್ ಲೂರ್ದ್ ಮೇರಿ, ಪ್ರಾಂಶುಪಾಲರಾದ ಸಿಸ್ಟರ್ ರೋಜಾ ಹಾಗೂ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಆಡಳಿತ ಮಂಡಳಿಯ ಎಲ್ಲಾ ಸಿಸ್ಟರ್ಸ್ ಗಳು ಹಾಜರಿದ್ದರು.






































