
ಮಡಿಕೇರಿ ಆ.22 NEWS DESK : ನ್ಯಾಯಮೂರ್ತಿ ನಾಗಮೋಹನ್‍ದಾಸ್ ಅವರ ಒಳ ಮೀಸಲಾತಿ ವರದಿಯನ್ನು ಜಾರಿ ಮಾಡುವುದಕ್ಕೂ ಮೊದಲು ರಾಜ್ಯ ಸರ್ಕಾರ ಪುನರ್ ಪರಿಶೀಲನೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪರಿಶಿಷ್ಟ (ಬಲಗೈ) ಸಂಬಂಧಿತ ಜಾತಿಗಳ ಒಕ್ಕೂಟದ ಕೊಡಗು ಘಟಕ ಮಡಿಕೇರಿಯಲ್ಲಿ ಇಂದು ಪ್ರತಿಭಟನೆ ನಡೆಸಿತು. ಜಿಲ್ಲಾಡಳಿತದ ಭವನದ ಎದುರು ಬೇಡಿಕೆ ಈಡೇರಿಕೆಗಾಗಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಬಲಗೈ ಪಂಗಡಕ್ಕೆ ಸರಕಾರ ನ್ಯಾಯ ಒದಗಸಬೇಕು ಎಂದು ಆಗ್ರಹಿಸಿದರು. ಒಕ್ಕೂಟದ ಜಿಲ್ಲಾ ಸಂಚಾಲಕ ರಾಜಪ್ಪ ಅವರು ಮಾತನಾಡಿ, ರಾಜ್ಯ ಸರಕಾರ ಒಳ ಮೀಸಲಾತಿಯ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿಯನ್ನು ಜಾರಿಗೆ ಮುಂದಾಗುತ್ತಿದೆ. ಆದರೆ, ಈ ವರದಿಯಲ್ಲಿ ರಾಜ್ಯದ ಬಹುಸಂಖ್ಯಾತರಾದ ಪರಿಶಿಷ್ಟ ಬಲಗೈ ಸಂಬಂಧಿತ ಜಾತಿಗಳಿಗೆ ಶೇ.5 ಮೀಸಲಾತಿಯನ್ನು, ಎಡಗೈಗೆ ಶೇ.7 ಮೀಸಲಾತಿಯನ್ನು ಶಿಫಾರಸ್ಸು ಮಾಡಿರುವುದು ಸಮಂಜಸವಲ್ಲವೆಂದು ತಿಳಿಸಿದರು. ಪರಿಶಿಷ್ಟ ಎಡಗೈ ಜಾತಿ ಬಾಂಧವರು ನಮ್ಮ ಅಣ್ಣ ತಮ್ಮಂದಿರೇ ಆಗಿದ್ದಾರೆ ಮತ್ತು ಅವರಿಗೆ ಮೀಸಲಾತಿ ಸೌಲಭ್ಯ ನೀಡಬಾರದು ಎನ್ನುವ ಬೇಡಿಕೆ ನಮ್ಮದಲ್ಲ. ಬದಲಾಗಿ ಸಮಾನ ಮೀಸಲಾತಿಯನ್ನು ಒದಗಿಸಬೇಕೆನ್ನುವುದು ನಮ್ಮ ಪ್ರಮುಖ ಆಗ್ರಹವಾಗಿದೆ ಎಂದು ಸ್ಪಷ್ಟಪಡಿಸಿದರು. 1985ರ ಅಂಕಿ ಅಂಶಗಳಂತೆ ರಾಜ್ಯದಲ್ಲಿ ಶೇ.70 ರಷ್ಟು ಪರಿಶಿಷ್ಟ ಬಲಗೈ ಸಮಾಜ ಬಾಂಧವರಿದ್ದರು. ಈಗಿನ ಜಾತಿಗಳ ದತ್ತಾಂಶದಂತೆ ಪರಿಶಿಷ್ಟ ಬಲಗೈ ಸಮೂಹದ ಜನಸಂಖ್ಯೆ 37,38,717 ಇದೆಯೆಂದು ರಾಜಪ್ಪ ಅವರು ಪ್ರತಿಪಾದಿಸಿದರು. ವರದಿಯ ಪುನರ್ ಪರಿಶೀಲನೆಗೆ ಉಪ ಸಮಿತಿಯನ್ನು ರಚಿಸಿ ದತ್ತಾಂಶಗಳನ್ನು ಸಂಗ್ರಹಿಸಿ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ, ಪರಿಶಿಷ್ಟ ಬಲಗೈ ಸಮೂಹಕ್ಕೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಒಕ್ಕೂಟದ ಪ್ರಮುಖರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ರಾಜ್ಯ ಸಂಘಟನಾ ಸಂಯೋಜಕ ರಾಜಶೇಖರ್, ಜಿಲ್ಲಾ ಸಂಘಟನಾ ಸಂಚಾಲಕ ದೇವರಾಜ, ಪ್ರಮುಖರಾದ ಪೊನ್ನಪ್ಪ, ಗೋವಿಂದರಾಜ, ಚನ್ನಕೇಶವ, ರಾಜು, ಡೀಲಕ್ಷ, ದಯಾಕರ, ವೀರಭದ್ರ, ಎಸ್.ಜೆ.ರಾಜಪ್ಪ, ಹೆಬ್ಬುಲುಸೆ ಚಂದ್ರು, ಒಕ್ಕೂಟದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ರೇಖಾ, ಜಿಲ್ಲಾ ಸಂಚಾಲಕರಾದ ಮಂಜುಳಾ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.









