
ಮಡಿಕೇರಿ ಆ.22 NEWS DESK : ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಅನುದಾನ ಒದಗಿಸುವಂತೆ ಒತ್ತಾಯಿಸಿ ಕೊಡಗು ಹೆಗ್ಗಡೆ ಸಮಾಜದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ ಸಮಾಜದ ಪ್ರಮುಖರು ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಆರ್ಥಿಕ ನೆರವು ಒದಗಿಸಲು ಮನವಿ ಮಾಡಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕರಾದ ಪೊನ್ನಣ್ಣ ಈ ವಿಚಾರವನ್ನು ಈಗಾಗಲೇ ತಿಳಿಸಿದ್ದು ಶೀಘ್ರದಲ್ಲಿ ಕೊಡಗು ಹೆಗ್ಗಡೆ ಸಮಾಜದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು. ನಿಯೋಗದಲ್ಲಿ ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ, ಮಾಜಿ ಅಧ್ಯಕ್ಷರಾದ ಪಡಿಞರಂಡ ಅಯ್ಯಪ್ಪ, ಸಮಾಜದ ಉಪಾಧ್ಯಕ್ಷರಾದ ಚರ್ಮಂಡ ಪೂವಯ್ಯ, ಖಜಾಂಚಿ ಕೊರಂಡ ಪ್ರಕಾಶ್ ನಾಣಯ್ಯ, ಪ್ರಮುಖರಾದ ಕೊರ್ಕಂಡ ಚಂದ್ರು ಹಾಗೂ ಸದಸ್ಯರು ಹಾಜರಿದ್ದರು.





































