
ಮಡಿಕೇರಿ ಆ.25 NEWS DESK : ಪೊನ್ನಂಪೇಟೆ ತಾಲ್ಲೂಕಿನ ನಾಲ್ಕೇರಿ ಗ್ರಾಮದ ಬೊಮ್ಮಡು ಆಶ್ರಮ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ರೂ.23 ಲಕ್ಷ ವೆಚ್ಚದ ಗ್ರಂಥಾಲಯ ಹಾಗೂ ರೂ.2 ಕೋಟಿ ವೆಚ್ಚದ ವಸತಿ ಗೃಹ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ವಿದ್ಯಾಭ್ಯಾಸಕ್ಕೆ ಆಶ್ರಮ ಶಾಲೆಯು ಬಹುದೊಡ್ಡ ಕೊಡುಗೆ ನೀಡುತ್ತಿದೆ. ಸರಕಾರವು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಉತ್ತಮ ಸೌಲಭ್ಯ ಒದಗಿಸಲು ಕ್ರಮ ಕೈಗೊಂಡಿದೆ. ಇದರ ಸದುಪಯೋಗ ನಾಡಿನ ವಿದ್ಯಾರ್ಥಿಗಳಿಗೆ ಲಭಿಸುವಂಥಾಗಲಿ ಎಂದು ಹೇಳಿದರು. ಪ್ರಪಂಚದ ಬಗೆಗಿನ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಲು ಪ್ರತಿಯೊಬ್ಬರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಈಗ ನಿರ್ಮಿಸಲು ಉದ್ದೇಶಿಸಿರುವ ನೂತನ ಗ್ರಂಥಾಲಯಕ್ಕೆ ಸರಕಾರವು ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಿದೆ. ಇದರ ಸದುಪಯೋಗವನ್ನೂ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ನೂತನ ವಸತಿ ಗೃಹ ಸಹ ಮಕ್ಕಳಿಗೆ ಉತ್ತಮ ಸೌಲಭ್ಯವನ್ನು ಒದಗಿಸುವಂತೆ ನಿರ್ಮಾಣಗೊಳ್ಳುತ್ತಿದ್ದು, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು. ಈ ಸಂದರ್ಭ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ನಾಲ್ಕೇರಿ ವಲಯ ಅಧ್ಯಕ್ಷ ತಿತೀರ ಕಟ್ಟಿ ಕಾರ್ಯಪ್ಪ, ಪಂಚಾಯಿತಿ ಅಧ್ಯಕ್ಷ ಸೋಮಯ್ಯ, ಕಾನೂರು ವಲಯ ಅಧ್ಯಕ್ಷ ರಮೇಶ್, ಪ್ರಮುಖರಾದ ಸಿದ್ದು ನಾಚಪ್ಪ, ನಿಖಿಲ್, ಮನು, ಬಾಡಗ ವಲಯ ಅಧ್ಯಕ್ಷರಾದ ಚಿಮ್ಮಣಮಾಡ ರವಿ, ಕಾಡ್ಯಮಾಡ ಬೋಪಣ್ಣ, ಕಾನೂರು ಪಂಚಾಯಿತಿ ಸದಸ್ಯರು, ಶ್ರೀಮಂಗಲ ವಲಯ ಅಧ್ಯಕ್ಷರಾದ ಪಲ್ವಿನ್ ಪೂಣಚ್ಚ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಮ್ಮಡ ಸೋಮಣ್ಣ, ಐಟಿಡಿಪಿ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.









