
ಸೌತಡ್ಕ NEWS DESK ಆ.27 : ಬಯಲು ಆಲಯ ಗಣಪತಿ ಹಾಗೂ ಗಂಟೆ ಗಣಪತಿ ಎಂಬ ಖ್ಯಾತಿಯ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಸಮೀಪದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಗಣೇಶ ಚತುರ್ಥಿ ಉತ್ಸವವನ್ನು ಶ್ರದ್ಧಾಭಕ್ತಿ, ವಿಜೃಂಭಣೆಯಿಂದ ಆಚರಿಸಲಾಯಿತು. 108 ಕಾಯಿ ಗಣಹೋಮ, ರಂಗಪೂಜೆ ಮತ್ತು ಮಹಾಪೂಜೆ ನೆರವೇರಿತು. ನಂತರ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ದಿನೇಶ್ ಮೆಹಂದಳೆ ಅವರ ನೇತೃತ್ವದಲ್ಲಿ ನೂರು ಮಂದಿ ಬಾಣಸಿಗರ ತಂಡ 600 ತೆಂಗಿನಕಾಯಿ, 230 ಕೆಜಿ ಬೆಲ್ಲ, 50 ಲೀಟರ್ ತುಪ್ಪ ಹಾಗೂ 2.5 ಕ್ವಿಂಟಾಲ್ ಮೈದಾ ಬಳಸಿ 30 ಸಾವಿರ ಮೋದಕಗಳನ್ನು ತಯಾರಿಸಿ, ಶ್ರೀ ಮಹಾಗಣಪತಿಗೆ ನೈವೇದ್ಯವಾಗಿ ಸಲ್ಲಿಸಿದರು. 12 ಸಾವಿರ ಅವಲಕ್ಕಿ ಪಂಚಕಜ್ಜಾಯ, 4 ಕ್ವಿಂಟಾಲ್ ಕಡಲೆ ಪಂಚಕಜ್ಜಾಯ ಹಾಗೂ 5,000 ಲಾಡುಗಳನ್ನು ತಯಾರಿಸಲಾಗಿತ್ತು. ಇದಕ್ಕಾಗಿ 5,000 ತೆಂಗಿನಕಾಯಿ, 3,600 ಕೆಜಿ ಅವಲಕ್ಕಿ ಮತ್ತು 1,200 ಕೆಜಿ ಬೆಲ್ಲ ಬಳಸಲಾಗಿತ್ತು.










