

ಮಡಿಕೇರಿ ಆ.28 NEWS DESK : ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ 43ನೇ ಶ್ರೀ ಗೌರಿ ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶ್ರೀ ಗಣೇಶೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಅರ್ಚಕರು ಗಣಪತಿ ಹೋಮ ನೆರವೇರಿಸಿ, ಶ್ರೀ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ನಂತರ ಪ್ರಾರ್ಥನೆ, ವಿವಿಧ ಅಭಿಷೇಕ, ಕುಂಕುಮಾರ್ಚನೆ, ಪಂಚಕಜ್ಜಾಯ ಪ್ರಸಾದ ಅರ್ಪಣೆ, ನೈವೇದ್ಯ ಪ್ರಸಾದವನ್ನು ಅರ್ಪಿಸಿ ಮಹಾಪೂಜೆಯನ್ನು ನೆರವೇರಿಸಿದರು. ಭಕ್ತಾದಿಗಳು ಸಂಕಲ್ಪವನ್ನು ಮಾಡಿಸಿ ಮಹಾಗಣಪತಿ ಪೂಜಾ ಸೇವೆಯನ್ನು ನಡೆಸಿ ಕೊಟ್ಟರು. ನಂತರ ಪ್ರಸಾದ ವಿತರಣೆ ಹಾಗೂ ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣಾ ಸೇವೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ರುದ್ರಮ್ ಚಂಡೆ ಬಳಗದವರಿಂದ ಚಂಡೆ ಸೇವೆ ಹಾಗೂ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆದವು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು, ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.









