
ಮಡಿಕೇರಿ NEWS DESK ಆ.29 : ತಮ್ಮ ಸರಳತೆಯ ಮೂಲಕವೇ ಯುವ ಮನಸ್ಸುಗಳನ್ನು ಗೆದ್ದಿರುವ ಶಾಸಕ ಡಾ.ಮಂತರ್ ಗೌಡ ಅವರು ಇಂದು ಮಡಿಕೇರಿಯ ವಿವಿಧ ಬಡಾವಣೆಗಳ ಗಣೇಶೋತ್ಸವ ಸಮಿತಿಗಳನ್ನು ಭೇಟಿಯಾದರು. ಪ್ರತಿಷ್ಠಾಪಿಸಲ್ಪಟ್ಟಿರುವ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಪುಟಾಣಿ ನಗರದ ಉದ್ಭವ ಶ್ರೀ ವಿನಾಯಕ ಸೇವಾ ಸಮಿತಿಗೆ ಆಗಮಿಸಿ ಸದಸ್ಯರ ಉಪಸ್ಥಿತಿಯಲ್ಲಿ ಪೂಜೆಯಲ್ಲಿ ಭಾಗಿಯಾದರು. ಗಣೇಶನ ಮೂರ್ತಿಯ ವಿಸರ್ಜನೋತ್ಸವವನ್ನು ಅತ್ಯಂತ ಸಂಭ್ರಮ ಮತ್ತು ಸಂಯಮದಿಂದ ಆಚರಿಸುವಂತೆ ಮನವಿ ಮಾಡಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಬಿ.ವೈ.ರಾಜೇಶ್, ಶ್ರೀಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಸದಸ್ಯ ಪ್ರಕಾಶ್ ಆಚಾರ್ಯ ಮತ್ತಿತರ ಪ್ರಮುಖರು ಹಾಗೂ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಹಾಜರಿದ್ದರು.









