
ಮಡಿಕೇರಿ ಸೆ.1 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಮಡಿಕೇರಿ ಸಾಯಿ ಹಾಕಿ ತರಬೇತಿ ಕೇಂದ್ರದ ಮುಖ್ಯ ತರಬೇತುದಾರರು ಮತ್ತು ಪ್ರಭಾರ ನಿರ್ದೇಶಕರಾದ ಮಿನಿ ಉಣ್ಣಿರಾಜ್, ರಾಷ್ಟ್ರೀಯ ಕ್ರೀಡಾ ದಿನವನ್ನು ಹಾಕಿ ಮಾಂತ್ರಿಕರಾದ ಧ್ಯಾನಚಂದ್ ಅವರ ಜನ್ಮದಿನದ ಪ್ರಯುಕ್ತ ಆಚರಿಸಲಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷರೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ.ಬಿ.ರಾಘವ ಜೀವನದಲ್ಲಿ ಏನಾದರೂ ಸಾಧನೆ ಮಾಡಿದಾಗ ದೇಶ ಸಾಧಕರನ್ನು ಸದಾ ಸ್ಮರಿಸುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಧನೆ ಹಾದಿಯಲ್ಲಿ ಮುನ್ನುಗ್ಗಬೇಕು ಎಂದು ಕರೆ ನೀಡಿದರು. ಮೊಬೈಲ್ ಬಳಕೆ ಕಡಿಮೆ ಮಾಡಿ, ದೈಹಿಕ ಶಕ್ತಿ ಹೆಚ್ಚಿಸಿಕೊಳ್ಳಿ, ಕ್ರೀಡೆಯಿಂದ ನಮ್ಮ ಆರೋಗ್ಯವನ್ನು ಸ್ಥಿರವಾಗಿ ಕಾಪಾಡಿಕೊಳ್ಳಬಹುದು” ಎಂದು ಸಲಹೆ ನೀಡಿದರು. ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಪಿ.ಸಿ.ರಮೇಶ್ ಮತ್ತು ಕ್ರೀಡಾ ವಿಭಾಗದ ಸಂಯೋಜಕ ಅಲೋಕ್ ಬಿಜೈ ಮತ್ತು ಎಲ್ಲ ಕ್ರೀಡಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ರಾಷ್ಟ್ರೀಯ ಕ್ರೀಡಾ ದಿನದ ಪ್ರಯುಕ್ತ ಎಲ್ಲಾ ಕ್ರೀಡಾ ವಿಭಾಗದ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರಮಾಣ ವಚನವನ್ನು ಬೋಧಿಸಲಾಯಿತು. ಪ್ರಥಮ ಬಿಕಾಂ ವಿದ್ಯಾರ್ಥಿನಿ ಚೊಂದಮ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ತೃತೀಯ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿನಿ ಭವಿತಾ ಸ್ವಾಗತಿಸಿದರು. ಪ್ರಥಮ ಬಿಬಿಎ ವಿದ್ಯಾರ್ಥಿನಿ ರಕ್ಷಿತ ಪೊನ್ನಮ್ಮ ಧ್ಯಾನಚಂದ್ ಅವರ ಪರಿಚಯ ಮಾಡಿಕೊಟ್ಟರು. ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿಯಾದ ಸ್ಪರ್ಶ ಅತಿಥಿಗಳ ಪರಿಚಯ ಮಾಡಿದರು. ತೃತೀಯ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿನಿ ಟಿ.ವಿ.ವರ್ಷ ಕಾರ್ಯಕ್ರಮ ನಿರೂಪಿಸಿದರು.








