
ನಾಪೋಕ್ಲು ಸೆ.2 NEWS DESK : ಪೇರೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಬೆಳೆಗಾರರು ಆತಂಕ ಪಡುವಂತಾಗಿದೆ. ಬಲ್ಲಮಾವಟ್ಟಿ ಗ್ರಾಮ ಪಂಚಾಯತಿಯ ಪೇರೂರು ಗ್ರಾಮದ ನಿವಾಸಿ ಬೊಟ್ಟೋಳಂಡ ರವಿ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ, ಕಾಫಿ, ತೆಂಗು, ಅಡಿಕೆ ಹಣ್ಣಿನ ಗಿಡಗಳನ್ನು ತಿಂದು ಬಾರಿ ನಷ್ಟ ಮಾಡಿವೆ. ಪೇರೂರು ಗ್ರಾಮ ವ್ಯಾಪ್ತಿಯಲ್ಲಿ ಪದೇಪದೇ ಕಾಡಾನೆಗಳ ಹಿಂಡು ದಾಳಿ ನಡೆಸುತ್ತಿದ್ದು, ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಈಗಾಗಲೇ ಈ ಪ್ರದೇಶದಲ್ಲಿ ಕಾಡಾನೆಗಳ ದಾಳಿಯಿಂದ ನಷ್ಟಕ್ಕೊಳಗಾದವರು ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೂ ಪರಿಹಾರ ಇದುವರೆಗೆ ಲಭಿಸಿರುವುದಿಲ್ಲ ಎಂದು ಬೆಳೆಗಾರರು ಆರೋಪಿಸಿದ್ದಾರೆ. ಸಂಕಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಕಾಡಾನೆಗಳ ನಿಯಂತ್ರಿಸುವಂತೆ ಬೊಟ್ಟೋಳಂಡ ರವಿ ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.









