
ಮಡಿಕೇರಿ ಸೆ.4 NEWS DESK : ಜಾಗತಿಕ ವಾಣಿಜ್ಯ ವ್ಯವಹಾರದಲ್ಲಿ ಕಾಫಿ ಬೇಡಿಕೆ ಕಡಿಮೆಯಾಗಿರುವುದರಿಂದ ಕಾಫಿ ಬೆಲೆಯಲ್ಲಿ ಭಾರೀ ಏರಿಳಿತವಾಗುತ್ತಿದೆ. ಇದರ ನಡುವೆಯೇ ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಜಿಎಸ್‍ಟಿ ನೀತಿಯಿಂದ ಕಾಫಿ ಉದ್ಯಮಕ್ಕೆ ಮತ್ತಷ್ಟು ಹೊಡೆತ ಬೀಳಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಫಿ ಬೆಲೆಯಲ್ಲಿನ ಅತಂತ್ರತೆ ಮತ್ತು ಅಮೆರಿಕ ದೇಶ ಭಾರತದ ಮೇಲೆ ವಿಧಿಸಿರುವ ಶೇ.50ರಷ್ಟು ರಫ್ತು ಸುಂಕದಿಂದ ಕಾಫಿ ಉದ್ಯಮ ಹಾಗೂ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ವಿತ್ತ ಸಚಿವರು ಘೋಷಣೆ ಮಾಡಿರುವ ಹೊಸ ಜಿಎಸ್‍ಟಿ ನೀತಿಯಲ್ಲಿ ಕೆಫೀನ್ ಹೊಂದಿರುವ ಪಾನೀಯ ಮೇಲೆ ಶೇ.40ರಷ್ಟು ತೆರಿಗೆ ವಿಧಿಸಿದ್ದು, ಇದು ದೇಶೀಯ ಉತ್ಪಾದನೆಯ ಬೇಡಿಕೆ ಮೇಲೆ ಹೊಡೆತ ಬೀಳಲಿದೆ ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಾಫಿ ಬೆಳೆಗಾರರು, ಉದ್ಯಮಗಳು ಹಾಗೂ ರಪ್ತು ವಲಯ ತೀವ್ರ ಸ್ವರೂಪದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿದ್ದು, ಕೇಂದ್ರ ಸರಕಾರ ಕಾಫಿ ಬೆಳೆಗೆ ಸಂಬಂಧಸಿದ ತೆರಿಗೆಯನ್ನು ತಕ್ಷಣ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.








