
ಮಡಿಕೇರಿ NEWS DESK ಸೆ.5 : ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಗಳ ಮೂಲಕ ನಡೆಸುವ ಕರ್ನಾಟಕ ರಾಜ್ಯ ಸರಕಾರದ ಪ್ರಸ್ತಾಪ ಸ್ವಾಗತಾರ್ಹವೆಂದು ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಮುಕ್ಕಾಟಿರ ಅಪ್ಪಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಾರ್ವತ್ರಿಕ ಚುನಾವಣೆಗಳಲ್ಲಿ ಮತಗಳ್ಳತನವಾಗುತ್ತಿರುವ ಕುರಿತು ಸಾಕ್ಷಿ ಸಹಿತ ಇಂಡಿಯಾ ಒಕ್ಕೂಟದ ನಾಯಕರುಗಳು ಗುರುತರ ಆರೋಪ ಮಾಡಿದ್ದರೂ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳುವ ಭರವಸೆ ನೀಡದೆ ಆರೋಪ ಮಾಡಿದವರ ವಿರುದ್ಧವೇ ರಾಜಕೀಯ ಪ್ರತಿಕ್ರಿಯೆಗಳನ್ನು ನೀಡುತ್ತಿವೆ ಎಂದು ಆರೋಪಿಸಿದ್ದಾರೆ. ಮತದಾನ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಇಚ್ಛೆ ಇಲ್ಲದಿರುವುದು ಸ್ಪಷ್ಟವಾಗುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಬ್ಯಾಲೆಟ್ ಪೇಪರ್ ಬಳಕೆಯ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಕಳೆದ ದೆಹಲಿ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಾವಿರಾರು ಮತದಾರರನ್ನು ಕೈ ಬಿಟ್ಟಿದ್ದ ಕ್ರಮವನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಅನೇಕ ಹಂತಗಳಲ್ಲಿ ಹೋರಾಟಗಳನ್ನು ನಡೆಸಿತ್ತು. ಈ ಕುರಿತು ಚುನಾವಣಾ ಆಯೋಗಕ್ಕೆ ದೂರನ್ನು ಸಲ್ಲಿಸಿದರೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ದೇಶದ ಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತಗಳ್ಳತನದ ಮೂಲಕ ಅಧಿಕಾರ ಪಡೆದುಕೊಳ್ಳುವ ಪ್ರಬಲರ ಹುನ್ನಾರ ತಪ್ಪಬೇಕಾದರೆ ಬ್ಯಾಲೆಟ್ ಪೇಪರ್ ನ ಅವಶ್ಯಕತೆ ಅತ್ಯಂತ ಜರೂರಾಗಿದೆ. ಆಮ್ ಆದ್ಮಿ ಪಾರ್ಟಿ ರಾಜ್ಯ ಸರ್ಕಾರದ ನಿರ್ಧಾರವನ್ನು ಸಂಪೂರ್ಣವಾಗಿ ಸ್ವಾಗತಿಸುತ್ತದೆ. ಬಿಜೆಪಿಗೆ ಮತಗಳ್ಳತನವನ್ನು ತಡೆಗಟ್ಟುವ ನೈಜ ಕಾಳಜಿ ಇದ್ದರೆ ಬಿಜೆಪಿ ಅಧಿಕಾರ ಹೊಂದಿರುವ ರಾಜ್ಯಗಳಲ್ಲಿಯೂ ಬ್ಯಾಲೆಟ್ ಪೇಪರ್ ಬಳಸುವ ನಿರ್ಧಾರ ಕೈಗೊಳ್ಳಲಿ ಎಂದು ಮುಕ್ಕಾಟಿರ ಅಪ್ಪಯ್ಯ ಒತ್ತಾಯಿಸಿದ್ದಾರೆ.








