
ವಿರಾಜಪೇಟೆ ಸೆ.8 NEWS DESK : ವಿರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಚರ್ಚ್ ನಲ್ಲಿ ಯೇಸುವಿನ ತಾಯಿ ಮೇರಿ ಮಾತೆಯ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮೇರಿ ಹಬ್ಬದ ಹಿಂದಿನ 9 ದಿವಸಗಳ ಕಾಲ ಚರ್ಚ್ ನಲ್ಲಿ ನವೇನ ಪ್ರಾರ್ಥನೆ ಜರುಗಿತು. ಈ ಸಂದರ್ಭ ವಿಶೇಷವಾದ ಬಲಿ ಪೂಜೆ, ಪ್ರಸಂಗ, ಪ್ರಬೋಧನೆಗಳು ಜರುಗಿದವು. ಮಾತೆ ಮರಿಯಮ್ಮನವರ ಗೌರವಾರ್ಥವಾಗಿ ಚರ್ಚ್ ಒಳ ಆವರಣದಲ್ಲಿರುವ ಮಾತೆ ಮರಿಯಮ್ಮ ಪ್ರತಿಮೆಗೆ ಪುಷ್ಪಾರ್ಚನೆಯನ್ನು ಧರ್ಮ ಗುರುಗಳು ಹಾಗೂ ನೆರೆದಿದ್ದ ಭಕ್ತಾದಿಗಳು ಸಲ್ಲಿಸಿದರು. ಈ ಒಂಬತ್ತು ದಿವಸಗಳ ವಿಶೇಷ ಪ್ರಾರ್ಥನೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂತ ಅನ್ನಮ್ಮ ದೇವಾಲಯ ವ್ಯಾಪ್ತಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಾತೆ ಮರಿಯಮ್ಮ ಹಬ್ಬದ ಪ್ರಯುಕ್ತ ಮುಂಜಾನೆಯಿಂದಲೇ ಚರ್ಚ್ ನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳು ಹಾಗೂ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ. ಫಾ. ಜೇಮ್ಸ್ ಡೊಮಿನಿಕ್ ಹಾಗೂ ಸಹಾಯಕ ಗುರುಗಳಾದ ರೆ. ಫಾ. ಅಭಿಲಾಶ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಿತು. ಧರ್ಮ ಗುರುಗಳು ಹಬ್ಬದ ಪ್ರಯುಕ್ತ ವಿಶೇಷವಾಗಿ ಆಡಂಬರದ ಗಾಯನ ಬಲಿಪೂಜೆಯನ್ನು ನೆರವೇರಿಸಿರು. ನಂತರ ನವೇನಾ ಪ್ರಾರ್ಥನೆ, ಧರ್ಮ ಗುರುಗಳಿಂದ ಪ್ರವಚನ ಜರುಗಿತು. ಬೈಬಲ್ ಪಠಣದ ಬಳಿಕ ಪರಮ ಪ್ರಸಾದವನ್ನು ವಿತರಿಸಲಾಯಿತು. ನೆರೆದಿದ್ದ ಭಕ್ತರು ಮಾತೆ ಮರಿಯಮ್ಮರವರ ಪ್ರತಿಮೆಗೆ ಪುಷ್ಪಾರ್ಚನೆಯನ್ನು ಸಲ್ಲಿಸಿ, ವಿಶೇಷ ಪ್ರಾರ್ಥನೆಯನ್ನು ಮಾಡಿದರು. ಭಕ್ತರು ಸಹ ಭೋಜನದಲ್ಲಿ ಪಾಲ್ಗೊಂಡರು. ಹಬ್ಬದ ಪ್ರಯುಕ್ತ ನಡೆದ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ವಿರಾಜಪೇಟೆ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕನ್ಯಾ ಸ್ತ್ರೀಯರು, ದೇವಸ್ಥಾನದ ಪಾಲನಾ ಸಮಿತಿಯವರು, ಸಾರ್ವಜನಿಕರು ಉಪಸ್ಥಿತರಿದ್ದರು.





































