
ಮಡಿಕೇರಿ ಸೆ.10 NEWS DESK : ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ 2024-25ನೇ ಸಾಲಿನಲ್ಲಿ 41.33 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸಂಘದ ಮಹಾಸಭೆ ಸೆ.13 ರಂದು ನಗರದ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಜಿ.ಎಂ.ಸತೀಶ್ ಪೈ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕು ಪ್ರಸ್ತುತ 2496 ಮಂದಿ ಸದಸ್ಯರುಗಳನ್ನು ಹೊಂದಿದ್ದು, ಬ್ಯಾಂಕಿನ ಅಧಿಕೃತ ಪಾಲು ಬಂಡವಾಳ ರೂ.180.74 ಲಕ್ಷ ಸಂಗ್ರಹಗೊಂಡಿದೆ. ಬ್ಯಾಂಕಿನ ದುಡಿಯುವ ಬಂಡವಾಳ ರೂ.5441.00 ಲಕ್ಷ ಆಗಿದ್ದು, ಕಳೆದ ಸಾಲಿಗಿಂತ ರೂ.126.23 ಲಕ್ಷದಷ್ಟು ಅಧಿಕಗೊಂಡಿದೆ ಎಂದರು. ಪ್ರಸ್ತುತ ರೂ.4867.68 ಲಕ್ಷದಷ್ಟು ವಿವಿಧ ಠೇವಣಾತಿಗಳನ್ನು ಹೊಂದಿದ್ದು, ಕಳೆದ ಸಾಲಿಗಿಂತ ರೂ.39.25 ಲಕ್ಷದಷ್ಟು ಏರಿಕೆ ಉಂಟಾಗಿದೆ. ಅಲ್ಲದೆ ತಾನು ಹೊಂದಿರುವ ಠೇವಣಾತಿಗಳ ಮೇಲೆ ಪೂರ್ಣ ಪ್ರಮಾಣದಲ್ಲಿ ಡಿಪಾಜಿಟ್ ಇನ್ಸೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್‍ನಲ್ಲಿ ವಿಮೆ ಇಳಿಸಲಾಗಿದೆ. ಬ್ಯಾಂಕು ತನ್ನ ದ್ರವ್ಯಾಸ್ಥೆಯನ್ನು ನಿಗಧಿತ ಮಿತಿಯೊಳಗೆ ಕಾಯ್ದುಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು. ಸುಮಾರು ರೂ.674.91 ಲಕ್ಷದಷ್ಟು ಹಣವನ್ನು ವಿವಿಧ ಬ್ಯಾಂಕುಗಳಲ್ಲಿ ವಿನಿಯೋಗಿಸಲಾಗಿದ್ದು, ಬ್ಯಾಂಕಿನಿಂದ ಗ್ರಾಹಕರುಗಳಿಗೆ 2977.90 ಲಕ್ಷ ರೂ. ವಿವಿಧ ರೂಪದ ಸಾಲಗಳನ್ನು ವಿತರಿಸಿದೆ. ಇದರಲ್ಲಿ ಜಾಮೀನು ಸಾಲವಾಗಿ 600.11 ಲಕ್ಷ, ಮನೆ ಆಧಾರ ಸಾಲ 872.50 ಲಕ್ಷ, ಚಿನ್ನಾಭರಣ ಈಡಿನ ಸಾಲವಾಗಿ 1256.29 ಲಕ್ಷ ಸಾಲ ನೀಡಲಾಗಿದೆ. ಒಟ್ಟು ಸಾಲ ನೀಡಿಕೆಯಲ್ಲಿ ಅನುತ್ಪಾದಕ ಆಸ್ತಿಯ (ಎನ್‍ಪಿಎ) ಪ್ರಮಾಣವು ರೂ.63.27 ಲಕ್ಷ ಆಗಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 512.83 ಲಕ್ಷ ವಹಿವಾಟು ನಡೆಸಿದೆ ಎಂದು ತಿಳಿಸಿದರು. ಬ್ಯಾಂಕು ಜನರಲ್ ತಿಮ್ಮಯ್ಯ ರಸ್ತೆಯಲ್ಲಿನ ಶಾಖೆಯಲ್ಲಿ 109.02 ಲಕ್ಷ ಒಟ್ಟು ವ್ಯವಹಾರ ನಡೆಸಲಾಗಿದ್ದು, ರೂ.21.00 ಲಕ್ಷ ಲಾಭ ಗಳಿಸಿದೆ ಹಾಗೂ 634.84 ಲಕ್ಷ ರೂ.ಗಳನ್ನು ವಿವಿಧ ರೂಪದ ಸಾಲವಾಗಿ ವಿತರಿಸಲಾಗಿದೆ ಎಂದರು. ಬ್ಯಾಂಕಿನ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಪದವಿ ತರಗತಿಯಲ್ಲಿ ಉನ್ನತ ಶ್ರೀಣಿಯಲ್ಲಿ ತೇರ್ಗಡೆಯಾದವರಿಗೆ ಪ್ರತಿಭಾ ಪುರಸ್ಕಾರದಿಂದಿಗೆ ಗೌರವಿಸಿ, ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಬ್ಯಾಂಕಿನ ಕಟ್ಟದ ಮೇಲಂತಸ್ತಿನಲ್ಲಿ ಅಂದಾಜು ರೂ.12 ಲಕ್ಷಕ್ಕೆ ಒಳಪಟ್ಟು ನೂತನ ಸಭಾಂಗಣವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಬ್ಯಾಂಕು 2023-24ನೇ ಸಾಲಿನ ವರ್ಷಾಂತ್ಯಕ್ಕೆ ರೂ.168.29 ಲಕ್ಷ ಎನ್‍ಪಿಎ ಶೇ.5.91 ರಷ್ಟು ಹೊಂದಿದ್ದು, 2024-25ನೇ ಸಾಲಿನ ಎನ್‍ಪಿಎ ಪ್ರಮಾಣವನ್ನು ಗಣನೀಯವಾಗಿ ರೂ.103.02 ಲಕ್ಷಕ್ಕೆ ಇಳಿಸಿ ಶೇ.3.45ಕ್ಕೆ ಆರ್‍ಬಿಐನ ಮಿತಿಯೊಳಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಕೆ.ಆರ್.ನಾಗೇಶ್, ನಿರ್ದೇಶಕರಾದ ಬಿ.ಕೆ.ಜಗದೀಶ್, ಸಿ.ಕೆ.ಬಾಲಕೃಷ್ಣ, ಬಿ.ಎಂ.ರಾಜೇಶ್ ಹಾಗೂ ಆರ್.ಗಿರೀಶ್ ಉಪಸ್ಥಿತರಿದ್ದರು.









