
ಮಡಿಕೇರಿ ಸೆ.11 NEWS DESK : ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಬಾಳೆಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು “ಜೈವಿಕ ಗೊಬ್ಬರ – ರೈತರ ಚಿನ್ನ” ಎಂಬ ಶೀರ್ಷಿಕೆಯಲ್ಲಿ ನೈಸರ್ಗಿಕ ಕೃಷಿಯ ಪ್ರಮುಖ ತಯಾರಿಕೆಯಾದ “ನೀಮಾಸ್ತ್ರ” ಕುರಿತು ಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸಿದರು. ಈ ಸಂದರ್ಭದಲ್ಲಿ ರೈತರಿಗೆ ನೀಮಾಸ್ತ್ರದ ತಯಾರಿಕಾ ವಿಧಾನವನ್ನು ಹಂತ ಹಂತವಾಗಿ ವಿವರಿಸಿ, ಪ್ರಾಯೋಗಿಕವಾಗಿ ತೋರಿಸಲಾಯಿತು. ಪ್ರದರ್ಶನವನ್ನು ಬಾಳೆಲೆ ಕೃಷಿ ಅಧಿಕಾರಿ ಮೀರಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಡೆಸಿದರು. ವಿದ್ಯಾರ್ಥಿಗಳು ನೀಮಾಸ್ತ್ರ ತಯಾರಿಕೆಯ ಕ್ರಮ, ಅದರ ಪ್ರಯೋಜನಗಳು ಹಾಗೂ ಕೀಟ ನಿರ್ವಹಣೆಯಲ್ಲಿ ಇದರ ಪರಿಣಾಮಕಾರಿತ್ವವನ್ನು ರೈತರಿಗೆ ವಿವರಿಸಿದರು. ಕಾರ್ಯಾಗಾರದ ಪ್ರಮುಖ ಲಾಭಾಳುಗಳು ಸಣ್ಣ ಮತ್ತು ಮಧ್ಯಮ ರೈತರು ಆಗಿದ್ದು, ಜೈವಿಕ ಗೊಬ್ಬರವನ್ನು ಅಳವಡಿಸಿಕೊಳ್ಳುವ ಮೂಲಕ ರಾಸಾಯನಿಕ ಅವಲಂಬನೆಯನ್ನು ಕಡಿಮೆ ಮಾಡಿ, ಶಾಶ್ವತ ಕೃಷಿ ಸಾಧಿಸಬಹುದೆಂಬ ಸಂದೇಶವನ್ನು ವಿದ್ಯಾರ್ಥಿಗಳು ನೀಡಿದರು.









