
ಮಡಿಕೇರಿ ಸೆ.13 NEWS DESK : ಕೊಡಗು ಜಿಲ್ಲಾ ಮಹಿಳಾ ಬ್ಯಾಂಕ್ 2024-25ನೇ ಸಾಲಿನಲ್ಲಿ ರೂ.9.45 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸೆ.18 ರಂದು ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷೆ ಅರವಿಂದ ಅಣ್ಣಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕೊಡವ ಸಮಾಜದಲ್ಲಿ ಮಹಾಸಭೆ ನಡೆಯಲಿದ್ದು, ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಜಿಲ್ಲೆಯ ಏಕೈಕ ಮಹಿಳಾ ಬ್ಯಾಂಕ್ ಇದಾಗಿದ್ದು, 1997ರಲ್ಲಿ ಸ್ಥಾಪನೆ ಮಾಡಲಾಯಿತು. ಜಿಲ್ಲೆಯ ಹಿರಿಯ ಮಹಿಳೆ ಗಂಗಮ್ಮ ಬೋಪಯ್ಯ ಮತ್ತು ಪ್ರೇಮ ಸೋಮಯ್ಯ ಅವರು ಮಹಿಳೆಯರಿಗಾಗಿ ಬ್ಯಾಂಕ್ ಅಗತ್ಯವಿದೆ ಎಂದು ಭಾವಿಸಿ ಅಂದು ಸ್ಥಾಪನೆ ಮಾಡಿದರು ಎಂದು ತಿಳಿಸಿದರು. ಬ್ಯಾಂಕಿನಲ್ಲಿ ಒಟ್ಟು 2376 ಸದಸ್ಯರಿದ್ದು, ಪಾಲುಬಂಡವಾಳ 44.06 ಲಕ್ಷ ರೂ ಆಗಿದೆ. ಬ್ಯಾಂಕ್‍ನ ನಿಧಿಗಳು 32.31 ಲಕ್ಷ ರೂ, ಒಟ್ಟು ಠೇವಣಿ 10.07 ಕೋಟಿ ರೂ. ಆಗಿದೆ. ಒಟ್ಟು ಸಾಲ 7.27 ಕೋಟಿ ಹೊರಬಾಕಿ ಆಗಿದ್ದು, ಪ್ರಸಕ್ತ ಸಾಲಿನಲ್ಲಿ ಶೇ.98.67 ರಷ್ಟು ಸಾಲ ವಸೂಲಾತಿಯಾಗಿದೆ. ಅಲ್ಲದೇ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ನೀಡಲಾಗುವ ಅತ್ಯತ್ತಮ ಪಟ್ಟಣ ಬ್ಯಾಂಕ್ ಪ್ರಶಸ್ತಿಯನ್ನು ನಮ್ಮ ಬ್ಯಾಂಕ್ 3 ಬಾರಿ ಪಡೆದ ಹೆಮ್ಮೆಗೆ ಪಾತ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಪ್ರಸ್ತುತ ಬ್ಯಾಂಕ್‍ನಲ್ಲಿ ನಿರಖು ಠೇವಣಿ, ಮಾಸಿಕ ಠೇವಣಿ, ಉಳಿತಾಯ ಠೇವಣಿ, ಪಿಗ್ಮಿ ಠೇವಣಿ ವ್ಯವಸ್ಥೆಯಿದೆ. ಜತೆಗೆ ಬ್ಯಾಂಕಿನ ಅಭಿವೃದ್ಧಿಗಾಗಿ ನಮ್ಮಲ್ಲಿ ಜಾಮೀನು ಸಾಲ, ಆಭರಣ ಸಾಲ, ಸ್ವ ಸಹಾಯ ಸಂಘ ಸಾಲ, ವಾಹನ ಸಾಲ ಸೇರಿದಂತೆ ವಿವಿಧ ಸಾಲ ನೀಡಲಾಗುತ್ತದೆ. ಬ್ಯಾಂಕಿನ ಅಭಿವೃದ್ಧಿಗಾಗಿ ಆರ್.ಬಿ.ಐ ನಿರ್ದೇಶನದಂತೆ ಕೋರ್ ಬ್ಯಾಂಕಿಂಗ್ ಅಳವಡಿಸಿ ಗಣಕೀಕೃತಗೊಳಿಸಲಾಗಿದೆ. ಬ್ಯಾಂಕಿನಲ್ಲಿ ಒಟ್ಟು 64 ಸ್ವ ಸಹಾಯ ಗುಂಪುಗಳು ರಚಿಸಲಾಗಿದ್ದು, ರೂ.31 ಲಕ್ಷ ಠೇವಣಿ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಪಿ.ಶೈಲಿ, ನಿರ್ದೇಶಕರುಗಳಾದ ಸಿ.ಲೀಲಾ ಮೇದಪ್ಪ, ಎಂ.ಎಂ.ಶ್ಯಾಮಲ ದಿನೇಶ್, ಆಶಾ ಚಿಣ್ಣಪ್ಪ, ಪಿ.ಪ್ರೇಮ ಕರುಂಬಯ್ಯ ಉಪಸ್ಥಿತರಿದ್ದರು.









