
ವಿರಾಜಪೇಟೆ ಸೆ.19 NEWS DESK : ಮಗ್ಗುಲದ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವಿದ್ಯಾ ಸಂಸ್ಥೆಯ ವತಿಯಿಂದ ನಾಂಗಲದಲ್ಲಿ ಪುನರ್ ನವೀಕರಿಸಲಾದ ನೂತನ ಬಸ್ ತಂಗುದಾಣವನ್ನು ಉದ್ಘಾಟಿಸಿದರು. ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಆಡಳಿತ ಮಂಡಳಿಯು ತನ್ನ ಸ್ವಂತ ಖರ್ಚಿನಿಂದಲೇ ಬಸ್ ತಂಗುದಾಣವನ್ನು ಪುನರ್ ನವೀಕರಿಸಿ ಸಾರ್ವಜನಿಕ ಸೇವೆಗೆ ಒದಗಿಸಿತು. ಈ ಸಂದರ್ಭ ಮಾತನಾಡಿದ ಶ್ರವಣ ಹೀನರ ಸಂಘದ ಅಧ್ಯಕ್ಷ ಜಿ.ವಿಲಿಯಮ್, ಪರಸ್ಪರ ಸಹಕಾರ ಮನೋಭಾವನೆಯು ಪ್ರತಿಯೊಬ್ಬರಲ್ಲಿಯೂ ಮೂಡಬೇಕು. ಗೌರವಯುತ ಬಾಳ್ವೆ, ಸೇವಾ ಮನೋಭಾವನೆಯಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ನಾವು ಸೇವೆಗಳನ್ನು ಮಾಡುವುದರಿಂದ ಸಮಾಜದಲ್ಲಿ ನಮ್ಮ ಪಾಲ್ಗೊಳ್ಳುವಿಕೆಯನ್ನು ವ್ಯಕ್ತಪಡಿಸಲು ಸಾಧ್ಯ ಎಂದರು. ಬಿಟ್ಟಂಗಾಲ ಗ್ರಾ.ಪಂ ಅಧ್ಯಕ್ಷರಾದ ಪ್ರಸನ್ನ ಸುಬ್ಬಯ್ಯ ಮಾತನಾಡಿ, ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಬಸ್ ತಂಗುದಾಣವನ್ನು ಲಿಟಲ್ ಸ್ಕಾಲರ್ಸ್ ಅಕಾಡೆಮಿ ವಿದ್ಯಾ ಸಂಸ್ಥೆಯು ಸುಸಜ್ಜಿತವಾಗಿ ನವೀಕರಣಗೊಳಿಸಿದೆ. ವಿದ್ಯಾ ಸಂಸ್ಥೆಯ ಸಾಮಾಜಿಕ ಕಳಕಳಿ ಮಾದರಿಯಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಹಂತದಿಂದಲೇ ವೈವಿಧ್ಯತೆಯಲ್ಲಿ ಏಕತೆ ಎನ್ನುವ ದ್ಯೇಯ ವಾಕ್ಯದೊಂದಿಗೆ ವಿದ್ಯಾಭ್ಯಾಸವನ್ನು ಪಡೆದು ಸಮಾಜದಲ್ಲಿ ಸಮಾನರಾಗಿ ಬಾಳಿ ಬದುಕಬೇಕು. ಮೊಬೈಲ್ ನ್ನು ಹೆಚ್ಚು ಬಳಸದೆ ಮೌಲ್ಯಯುತ ಶಿಕ್ಷಣವನ್ನು ಪಡೆಯಿರಿ ಎಂದು ಸಲಹೆ ನೀಡಿದರು. ಲಿಟಲ್ ಸ್ಕಾಲರ್ಸ್ ವಿದ್ಯಾಸಂಸ್ಥೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಇದೊಂದು ಮಾದರಿ ಸಂಸ್ಥೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್, ನಮ್ಮ ವಿದ್ಯಾ ಸಂಸ್ಥೆಯಿಂದ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಕೋನದಿಂದ ಇಲ್ಲಿ ಬಸ್ ತಂಗುದಾಣವನ್ನು ನವೀಕರಿಸಿದ್ದೇವೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡಿಸಿಕೊಳ್ಳಿ ಎಂದು ಕರೆ ನೀಡಿದರು. ಈ ಸಂದರ್ಭ ಬಿಟ್ಟಂಗಲ ಗ್ರಾಮ ಪಂಚಾಯಿತಿ ಪಿಡಿಒ ಶಫೀಕ್, ಕೊಡಗು ಜಿಲ್ಲಾ ಶ್ರವಣ ಹೀನರ ಸಂಘದ ಅಧ್ಯಕ್ಷ ಗೌರು ಸೋಮಣ್ಣ, ಕೊಡಗು ಜಿಲ್ಲಾ ಡೆಫ್ ಅಸೋಸಿಯೇಷನ್ ನ ಚೇರ್ಮನ್ ಜೋಸೆಫ್ ಸ್ವಾಮ್, ಮಹಾ ಕಾರ್ಯದರ್ಶಿ ಪುದಿಯ ತಂಡ ರಂಜಿತ್, ಸಂಘದ ಖಜಾಂಚಿ ಸುರೇಶ್, ಉಪಾಧ್ಯಕ್ಷರಾದ ಗಣೇಶ್ ರಾವ್ ಎ, ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಕಾರ್ಯದರ್ಶಿ ಪ್ರತಿಮಾ ರಂಜನ್, ಮುಖ್ಯ ಶಿಕ್ಷಕಿ ಮೀರಾ ಪೂಣಚ್ಚ, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಬಿಟ್ಟಂಗಾಲ ಗ್ರಾಮ ಪಂಚಾಯತಿ ಸದಸ್ಯರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.









