
ಮಡಿಕೇರಿ ಸೆ.19 NEWS DESK : ನಗರದ ತ್ಯಾಗರಾಜ ಕಾಲೋನಿ ಮತ್ತು ಗದ್ದಿಗೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮನೆ ಮನೆಗೆ ತೆರಳಿ ಜ್ವರ ಸಮೀಕ್ಷೆ ನಡೆಸಿ ಜನರಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸಲಾಯಿತು. ಸಮೀಕ್ಷೆ ಕಾರ್ಯದಲ್ಲಿ ನಗರಸಭೆ ಸದಸ್ಯರಾದ ಮೇರಿ ವೆಜಿಲ್ ಅವರು ಪಾಲ್ಗೊಂಡು ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರ ವಹಿಸುವಂತೆ ಜನರಿಗೆ ಕರೆ ನೀಡಿ ನಗರಸಭೆಯಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು. ಜಿಲ್ಲಾ ಎಂಟಮಾಲಿಜಿಸ್ಟ್ ಮಂಜುನಾಥ್ ಮಾತನಾಡಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿ ಇಟ್ಟುಕೊಂಡರೆ ಡೆಂಗ್ಯೂ, ಇಲಿ ಜ್ವರ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳು ಬರುವುದಿಲ. ಯಾವುದೇ ಜ್ವರವಿರಲಿ ಹತ್ತಿರದ ಆಸ್ಪತ್ರೆಯ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಕೃತ ಅವರು ಪ್ರತಿ ಮನೆಯ ಮುಂದಿನ ಚರಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು, ಮನೆಯ ಒಳಗೆ ಮತ್ತು ಹೊರಗೆ ನೀರು ತುಂಬಿಸುವ ತಾಣಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಲು ತಿಳಿಸಿದರು. ಡೆಂಗ್ಯೂ ಮತ್ತು ಇಲಿ ಜ್ವರ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಅವರು ಮಾತನಾಡಿ ನಗರ ಪ್ರದೇಶಗಳಲ್ಲಿ ಮೊದಲನೆಯ ಮತ್ತು ಮೂರನೆಯ ಶುಕ್ರವಾರ ಇಲಾಖಾ ನಿಯಮದಂತೆ ಪ್ರತಿ ವಾರ್ಡುಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಿ ಜನರಲ್ಲಿ ಅರಿವು ಮೂಡಿಸುವ ಕೆಲಸ ತಾಲ್ಲೂಕಿನ ಆರೋಗ್ಯ ನಿರೀಕ್ಷಣಾದಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ನಗರ ಆಶಾ ಕಾರ್ಯಕರ್ತರು ನಿರ್ವಹಿಸುತ್ತಿರುವುದಾಗಿ ತಿಳಿಸಿದರು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ ಅವರು ಮಾತನಾಡಿ ಪ್ರತಿ ಶುಕ್ರವಾರದಂದು ಎಲ್ಲರೂ ನೀರಿನ ತಾಣಗಳನ್ನು ಶುಚಿಗೊಳಿಸುವ ಮೂಲಕ ರೋಗಗಳ ನಿಯಂತ್ರಣಕ್ಕೆ ಮುಂದಾಗುವಂತೆ ತಿಳಿಸಿದರು.









