
ವಿರಾಜಪೇಟೆ ಸೆ.20 NEWS DESK : ವಿರಾಜಪೇಟೆ ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಸೆ.24 ರಂದು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30 ಗಂಟೆಗೆ ವಿರಾಜಪೇಟೆ ಭಾರತೀಯ ಸ್ಟೇಟ್ ಬ್ಯಾಂಕ್ ಮುಂಭಾಗದಲ್ಲಿರುವ ಅಮರ್ ಜವಾನ್ ಸ್ಮಾರಕದಲ್ಲಿ ಜಿಲ್ಲಾ ಪೋಲಿಸ್ ತುಕಡಿಯ ಗೌರವದೊಂದಿಗೆ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸಿ ದೇಶ ರಕ್ಷಣೆಗಾಗಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಲಾಗುವುದು ಎಂದು ಹೇಳಿದರು. ಕಾರ್ಯದರ್ಶಿ ಪುಗ್ಗೆರ ನಂದಾ ಮಾತನಾಡಿ, ಹುತಾತ್ಮರ ದಿನಾಚರಣೆಯಲ್ಲಿ ಅತಿಥಿಗಳಾಗಿ ಮುಖ್ಯಮಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಒಲಂಪಿಯನ್ ಲೆಪ್ಟಿನೆಂಟ್ ಕರ್ನಲ್ ಬಾಳೆಯಡ ಕೆ.ಸುಬ್ರಮಣಿ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ವಿರಾಜಪೇಟೆ ತಹಶೀಲ್ದಾರ್ ಪ್ರವೀಣ್ ಕುಮಾರ್, ಡಿ.ವೈ.ಎಸ್.ಪಿ ಮೋಹನ್ ಕುಮಾರ್, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಮುಖ್ಯಾಧಿಕಾರಿ ಪಟ್ಟಚೆರವಂಡ ನಾಚಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಜ ಚಂದ್ರಶೇಖರ್, ಖಜಾಂಚಿ ತೋರೆರ ಪೂವಯ್ಯ, ನಿರ್ದೇಶಕರಾದ ಸಲಾಂ ಎಂ.ಕೆ.ಕಡಂಗ, ಬಾಳೆಕುಟ್ಟಿರ ದಿನಿ ಬೋಪಯ್ಯ ಉಪಸ್ಥಿತರಿದ್ದರು.









