
ನಾಪೋಕ್ಲು ಸೆ.27 NEWS DESK : ನಾಪೋಕ್ಲು ಸಹಕಾರ ಮಹಿಳಾ ಸಮಾಜದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸಮಾಜದ ಸಭಾಂಗಣದಲ್ಲಿ ನಡೆಯಿತು. ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಸಮಾಜದ ಅಧ್ಯಕ್ಷರಾದ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಕಟ್ಟಡದ ಮೇಲ್ಚಾವಣಿ ದುರಸ್ತಿ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಿಸಲಾಗಿದೆ. ನಮ್ಮಲ್ಲಿ ಒಟ್ಟು 350 ಸದಸ್ಯರಿದ್ದು, ಸಂಬಂಧಿಸಿದ ಇಲಾಖೆಗಳ ನಿರ್ದೇಶನಗಳನ್ನು ಪಾಲಿಸಿಕೊಂಡು ನೂತನ ಸದಸ್ಯರನ್ನು ಸೇರ್ಪಡೆಗೊಳ್ಳಲಾಗುತ್ತಿದೆ ಎಂದರು. ಸದಸ್ಯರಲ್ಲದವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವಂತೆ ಮನವಿ ಮಾಡಿಕೊಂಡರು. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರ ಸಲಹೆ ಸಹಕಾರ ಅವಶ್ಯ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿ ಸಭೆಯಲ್ಲಿ ಸದಸ್ಯರ ಪ್ರಶ್ನೆ, ಸಲಹೆ, ಸೂಚನೆಗಳಿಗೆ ಉತ್ತರಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಹಕಾರ ಮಹಿಳಾ ಸಮಾಜ ಉಪಾಧ್ಯಕ್ಷೆ ಬೊಪ್ಪಂಡ ಶೈಲಾ ಬೋಪಯ್ಯ, ನಿರ್ದೇಶಕರಾದ ಬಿದ್ದಾಟಂಡ ಗಿರಿಜಾ ಬೋಪಣ್ಣ, ಕೇಟೋಳಿರ ಶಾರದಾ ಪಳಂಗಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕುಂಡ್ಯೋಳಂಡ ಕವಿತಾ ಮುತ್ತಣ್ಣ, ಅಪ್ಪಾರಂಡ ಡೇಸಿ ತಿಮ್ಮಯ್ಯ, ಪುಲ್ಲೆರ ಪದ್ಮಿನಿ ಭೀಮಯ್ಯ, ಕಾರ್ಯದರ್ಶಿ ಕೆ.ಹೆಚ್.ರಾಜೇಶ್ವರಿ ಲೋಕೇಶ್ ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಸಮಾಜದ ಸದಸ್ಯರಿಗೆ ಮನರಂಜನೆ ಹಾಗೂ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ನಂತರ ನೆನಪಿನ ಕಾಣಿಕೆ ನೀಡಿ ಶುಭ ಹಾರೈಸಲಾಯಿತು.
ವರದಿ : ದುಗ್ಗಳ ಸದಾನಂದ.









