
ಮಡಿಕೇರಿ ಸೆ.29 NEWS DESK : ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ವತಿಯಿಂದ ಭಾರತೀಯ ಕಾಫಿ ಮಂಡಳಿ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಯುಪಿಎಎಸ್‍ಐ ಸಂಸ್ಥೆಗಳ ಸಹಯೋಗದಲ್ಲಿ ಕೊಡಗಿನ ವಿವಿಧೆಡೆ ಅಂತರರಾಷ್ಟ್ರೀಯ ಕಾಫಿ ದಿನವನ್ನು ಆಚರಿಸುತ್ತಿದೆ ಎಂದು ಸಂಸ್ಥೆ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದಾ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ವಿಶ್ವಾದ್ಯಂತ ಕಾಫಿ ಬಳಕೆ ಮತ್ತು ಮೆಚ್ಚುಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯ ವಿಶೇಷ ದಿನದಂದು ಕೊಡಗಿನಾದ್ಯಂತ ನಾಲ್ಕು ಸ್ಥಳಗಳಲ್ಲಿ ಕಾಫಿ ವಿತರಣಾ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು. ಸೆ.30 ರಂದು ಬೆಳಿಗ್ಗೆ 10.40 ಗಂಟೆಗೆ ಪೊನ್ನಂಪೇಟೆ ಸಿಐಟಿ ಎಂಜಿನಿಯರಿಂಗ್ ಕಾಲೇಜು, ಅ.1 ರಂದು ಬೆಳಿಗ್ಗೆ 10.30 ಗಂಟೆಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆ ಹಾಗೂ ಮಾಲ್ದಾರೆ ಪಟ್ಟಣದಲ್ಲಿ, ಅ.4 ರಂದು ಸೋಮವಾರಪೇಟೆ ಚಿಕ್ಕ ಬಸಪ್ಪ ಕ್ಲಬ್ ನಲ್ಲಿ ಕಾರ್ಯಕ್ರಮ ನಡೆಸಿ, ಕಾಫಿ ವಿತರಿಸಲಾಗವುದೆಂದು ತಿಳಿಸಿದರು. ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ಕೊಡಗಿನಲ್ಲಿ ಕಾಫಿ ಜಾಗೃತಿಯನ್ನು ಮೂಡಿಸಲು ಮತ್ತು ಕಾಫಿ ಸಂಸ್ಕೃತಿಯನ್ನು ಉತ್ತೇಜಿಸಲು ಮೀಸಲಾಗಿರುವ ಪ್ರವರ್ತಕ ಸಂಸ್ಥೆಯಾಗಿದೆ. ಪ್ರಮುಖ ಕಾಫಿ ಸಂಘಗಳೊಂದಿಗಿನ ತನ್ನ ಪಾಲುದಾರಿಕೆಯ ಮೂಲಕ, ಸಮುದಾಯಕ್ಕೆ, ವಿಶೇಷವಾಗಿ ಯುವಜನರಿಗೆ, ಪರಿಪೂರ್ಣ ಕಪ್ ಕಾಫಿ ತಯಾರಿಸುವ ಕಲೆಯ ಬಗ್ಗೆ ಶಿಕ್ಷಣ ನೀಡಲು ಮತ್ತು ತೊಡಗಿಸಿಕೊಳ್ಳಲು ಶ್ರಮಿಸುತ್ತದೆ ಎಂದು ಅನಿತಾ ನಂದಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಖಜಾಂಚಿ ಕುಮಾರಿ ಕುಞಪ್ಪ, ಕಾಫಿ ಮಂಡಳಿ ಉಪ ನಿರ್ದೇಶಕ ಡಾ.ವಿ.ಚಂದ್ರಶೇಕರ್, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಬೆಳ್ಳಿಯಪ್ಪ ಉಪಸ್ಥಿತರಿದ್ದರು.









