

ಮಡಿಕೇರಿ NEWS DESK ಅ.5 : ಪ್ರಸ್ತುತ ನಡೆಯುತ್ತಿರುವ ಕರ್ನಾಟಕ ರಾಜ್ಯ ಸರಕಾರದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮತ್ತು ಮುಂದೆ ನಡೆಯಲಿರುವ ಕೇಂದ್ರ ಸರಕಾರದ ಜಾತಿ ಜನಗಣತಿಯ ಸಂದರ್ಭ ಅರೆಭಾಷೆ ಗೌಡರು ಜಾತಿಯ ಕಾಲಂನಲ್ಲಿ GOWDA (ಗೌಡ) ಎಂದು, ಉಪಜಾತಿ ಕಾಲಂನಲ್ಲಿ ಅರೆಭಾಷೆ ಗೌಡ, ಮಾತೃಭಾಷೆ ಕಾಲಂನಲ್ಲಿ ಅರೆಭಾಷೆ ಎಂದು ನಮೂದಿಸುವಂತೆ ಕೊಡಗು ಗೌಡ ಸಮಾಜದ ಹುಣಸೂರು ಅಧ್ಯಕ್ಷ ಕಾಳೇರಮ್ಮನ ಪೂಣಚ್ಚ(ಸೋನಾ) ಅವರು ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯ ಸರಕಾರವು ಈಗಾಗಲೇ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಜನಗಣತಿಯ ಸಮೀಕ್ಷೆಯನ್ನು ಆರಂಭಿಸಿದೆ. ಮುಂದಿನ ವರ್ಷ ಕೇಂದ್ರ ಸರಕಾರ ಕೂಡ ಗಣತಿ ಆರಂಭಿಸಲಿದ್ದು, ಎರಡೂ ಪ್ರಕ್ರಿಯೆಯ ಸಂದರ್ಭ ಕೊಡಗಿನ ಅರೆಭಾಷೆ ಗೌಡರು ಜಾತಿಯ ಕಾಲಂನಲ್ಲಿ GOWDA (ಗೌಡ), ಉಪಜಾತಿ ಅರೆಭಾಷೆ ಗೌಡ ಮತ್ತು ಮಾತೃ ಭಾಷೆ ಕಾಲಂನಲ್ಲಿ ಅರೆಭಾಷೆ ಎಂದು ನಮೂದಿಸುವಂತೆ ಕೋರಿದ್ದಾರೆ. ಉಪಜಾತಿಯಲ್ಲಿ ಅರೆಭಾಷೆ ಗೌಡ ಎಂಬುವುದನ್ನು ಪ್ರತ್ಯೇಕ ಕಾಲಂನಲ್ಲಿ ಸೇರಿಸಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಸಲ್ಲಿಸಿದ ಮನವಿಗೆ ಸರಕಾರ ಸ್ಪಂದಿಸಿದೆ. ಸಮುದಾಯ ಬಾಂಧವರು ಎಲ್ಲಾ ವಿವರಗಳನ್ನು ಗಮನದಲ್ಲಿರಿಸಿಕೊಂಡು ಉಪಜಾತಿ ಎನ್ನುವ ಕಾಲಂನಲ್ಲಿ ‘ಅರೆಭಾಷೆ ಗೌಡ’ ಎಂದು ನಮೂದಿಸಬೇಕು ಮತ್ತು ಕಡ್ಡಾಯವಾಗಿ ಎರಡೂ ಗಣತಿಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾರೆ. ಮೂಲತಃ ಅರೆಭಾಷೆ ಗೌಡರು ಒಕ್ಕಲಿಗ ಸಮುದಾಯದ ಭಾಗವಾಗಿದ್ದಾರೆ, ಆದರೆ ಅರೆಭಾಷೆ ಗೌಡರ ಶೈಕ್ಷಣಿಕ, ಕಂದಾಯ ಸೇರಿದಂತೆ ಎಲ್ಲಾ ಮೂಲ ದಾಖಲೆಗಳಲ್ಲಿ ‘ಗೌಡ’ ಎಂದೇ ನಮೂದಿಸಲಾಗಿದೆ. ಈಗ ಬದಲಾಯಿಸಿ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅರೆಭಾಷೆ ಗೌಡ ಸಮುದಾಯದ ಸಭೆಗಳನ್ನು ನಡೆಸಿ, ಕೊಡಗಿನ ಎಲ್ಲಾ ಗೌಡ ಸಮಾಜಗಳೊಂದಿಗೆ ಸಮಾಲೋಚಿಸಿ GOWDA (ಗೌಡ) ಎಂದು ನಮೂದಿಸಲು ಕೊಡಗು ಗೌಡ ಸಮಾಜಗಳ ಒಕ್ಕೂಟ ನಿರ್ಣಯ ಕೈಗೊಂಡಿದೆ. ಇದಕ್ಕೆ ಕೊಡಗು ಗೌಡ ಸಮಾಜದ ಹುಣಸೂರು ಘಟಕದ ಸಂಪೂರ್ಣ ಬೆಂಬಲವಿದೆ. ಗಣತಿಯಲ್ಲಿ ತಮ್ಮ ಜಾತಿಗೆ ಇರುವ ಇನ್ನೊಂದು ಹೆಸರು ಎಂಬ ಕಾಲಂ ಕೂಡ ಇದ್ದು, ಇದರಲ್ಲಿ ಒಕ್ಕಲಿಗ, ಕೊಡಗು ಗೌಡ, ಅರೆಭಾಷೆ ಒಕ್ಕಲಿಗ ಎಂದು ನಮೂದಿಸಲು ಸಲಹೆ ನೀಡಿದ್ದಾರೆ. ಎಲ್ಲಾ ಮೂಲ ದಾಖಲೆಗಳನ್ನು ಒಕ್ಕಲಿಗ ಎಂದು ಹೊಂದಿರುವ ಅರೆಭಾಷೆ ಗೌಡ ಸಮುದಾಯದವರು ಇದ್ದರೆ, ಜಾತಿ ಒಕ್ಕಲಿಗ, ಉಪಜಾತಿ ಅರೆಭಾಷೆ ಗೌಡ, ಅರೆಭಾಷೆ ಒಕ್ಕಲಿಗ ಮತ್ತು ಮಾತೃಭಾಷೆ ಅರೆಭಾಷೆ ಎಂದು ನಮೂದಿಸಲು ಯಾವುದೇ ಅಭ್ಯಂತರವಿರುವುದಿಲ್ಲ ಎಂದು ಕಾಳೇರಮ್ಮನ ಪೂಣಚ್ಚ(ಸೋನಾ) ಅವರು ಸ್ಪಷ್ಟಪಡಿಸಿದ್ದಾರೆ.










