
ಮಡಿಕೇರಿ ಅ.9 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಹಿರಿಯ ನಾಗರಿಕರು: ತಮ್ಮ ಆಶೋತ್ತರಗಳು, ಯೋಗಕ್ಷೇಮ ಮತ್ತು ಹಕ್ಕುಗಳನ್ನು ಸ್ಥಳೀಯ ಮತ್ತು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬಲ್ಲ ಸಶಕ್ತರು’ ಎಂಬ ಘೋಷವಾಕ್ಯದೊಂದಿಗೆ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಡೆಯಿತು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಹಿರಿಯ ನಾಗರಿಕರು ಸಮಾಜದ ಆಸ್ತಿ. ಇವರು ಪ್ರತಿಯೊಂದು ಕ್ಷೇತ್ರದಲ್ಲಿ ಮಾಡಿರುವಂತಹ ಸಾಧನೆಗಳು ಮಾದರಿಯಾಗಿವೆ. ಹಿರಿಯ ನಾಗರಿಕರ ಅನುಭವ ನಮಗೆ ದಾರಿದೀಪ ಎಂದರು. ಹಿರಿಯ ನಾಗರಿಕರು ದೇಶದ ಸಂಪತ್ತು. ಇವರಿಗಾಗಿ ಸರ್ಕಾರವು 10 ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಹಿರಿಯ ನಾಗರಿಕರ ಪಾಲನೆ ಪೋಷಣೆ ಸಂರಕ್ಷಣೆ ಕಾಯ್ದೆ 2018 ಜಾರಿಗೊಳಿಸಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹಿರಿಯರಿಗೆ ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನಕುಮಾರ್, ಹಿರಿಯ ನಾಗರಿಕರಿಗಾಗಿ ಜಿಲ್ಲೆಯಲ್ಲಿ ಹಗಲು ಯೋಗಕ್ಷೇಮ ಕೇಂದ್ರ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಹಾಗೂ ವೃದ್ಧಾಶ್ರಮಗಳು ಇದ್ದು, ಇವುಗಳ ಸದುಪಯೋಗ ಪಡೆದುಕೊಂಡು ಹಿರಿಯ ನಾಗರಿಕರು ತಮಗೆ ಸರ್ಕಾರದಿಂದ ದೊರೆಯುವ ಉಚಿತ ಬಸ್‍ಪಾಸ್ ಆರೋಗ್ಯ ಸೇವೆ ಪಿಂಚಣಿ ಇತರೆ ಸೇವೆ ಪಡೆದುಕೊಳ್ಳಲು ಇಲಾಖೆಯನ್ನು ಸಂಪರ್ಕಿಸಲು ತಿಳಿಸಿದರು. ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ವಿಮಲ ಅವರು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕುರಿತು ಪ್ರಸ್ತಾವಿಕವಾಗಿ ಮಾತನಾಡಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಈ ವರ್ಷದ ಘೋಷವಾಕ್ಯ ಹಿರಿಯ ನಾಗರಿಕರು ತಮ್ಮ ಆಶೋತ್ತರಗಳು, ಯೋಗ ಕ್ಷೇಮ ಮತ್ತು ಹಕ್ಕುಗಳನ್ನು ಸ್ಥಳೀಯ ಮತ್ತು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬಲ್ಲ ಸಶಕ್ತರು. ಹಿರಿಯ ನಾಗರಿಕರ ದಿನಾಚರಣೆಯನ್ನು ಅಮೆರಿಕದ ಅಂದಿನ ಅಧ್ಯಕ್ಷರಾದ ರೊನಾಲ್ಡ ರೇಗನ್ ಅವರು 1988 ಆಗಸ್ಟ್ 21 ನ್ನು ಹಿರಿಯ ನಾಗರಿಕರ ದಿನಾಚರಣೆಯಾಗಿ ಪ್ರಸ್ತಾಪಿಸಿ ಮೊದಲ ಬಾರಿಗೆ 1991 ರಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಅಕ್ಟೋಬರ್ 1 ನೇ ತಾರೀಖಿನಿಂದ ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತದೆ. ಈ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರು ಸಾಮಾಜಿಕ ಶೈಕ್ಷಣಿಕ ಕ್ರೀಡೆ ಇತರ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆಗಳನ್ನು ಸ್ಮರಿಸಿ ಅವರನ್ನು ಗೌರವಿಸುವಂತಹ ಕೆಲಸವನ್ನು ಮಾಡಲಾಗುತ್ತದೆ. ಅಲ್ಲದೇ ಹಿರಿಯ ನಾಗರಿಕರಿಗಾಗಿ ಸರ್ಕಾರದಿಂದ ಹಗಲು ಯೋಗಕ್ಷೇಮ ಕೇಂದ್ರ ಸಹಾಯವಾಣಿ ಕೇಂದ್ರ ಮತ್ತು ವೃದ್ಧಾಶ್ರಮಗಳು ಇರುವ ಬಗ್ಗೆ ಮತ್ತು ಹಿರಿಯ ನಾಗರಿಕರಿಗೋಸ್ಕರ ಹಿರಿಯ ನಾಗರಿಕರ ಪಾಲನೆ ಪೋಷಣೆ ಸಂರಕ್ಷಣೆ 2018ರ ಕಾಯ್ದೆಯನ್ನು ಜಾರಿಗೆ ತಂದಿದ್ದು ಅದರ ಸದುಪಯೋಗ ಪಡಿಸಿಕೊಳ್ಳಲು ಮಾಹಿತಿ ನೀಡಿದರು.









