



ಮಡಿಕೇರಿ ಅ.16 NEWS DESK : ನಗರದಂಚಿನಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಅ.21 ರಂದು ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ‘ದೀಪೋತ್ಸವ’ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಹೆಚ್.ಎಸ್.ಗೋವಿಂದ ಸ್ವಾಮಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾತ್ರಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ದೀಪೋತ್ಸವ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ದೇವಾಲಯದ ಟ್ರಸ್ಟಿ ಕಿರಣ್ ಕುಮಾರ್ ಮಾತನಾಡಿ, ರಾತ್ರಿ 7 ಗಂಟೆಗೆ ಕಳಸ ಪೂಜೆ, 8 ಗಂಟೆಗೆ ಅನ್ನದಾನ, ಪ್ರಸಾದ ವಿನಿಯೋಗ ನಡೆಯಲಿದ್ದು, ರಾತ್ರಿ 9 ಗಂಟೆಗೆ ತಾಯಿಯ ದರ್ಶನ ಹಾಗೂ 9.30 ಗಂಟೆಗೆ ದೀಪೋತ್ಸವ ಪ್ರಾರಂಭವಾಗಲಿದೆ. ನಂತರ ಭಕ್ತಾದಿಗಳು ಎಳ್ಳು ಬತ್ತಿಯನ್ನು ಹಚ್ಚಬಹುದು ಎಂದು ತಿಳಿಸಿದರು. ಮತ್ತೋರ್ವ ಟ್ರಸ್ಟಿ ವಿ.ಸಚಿನ್ ವಾಸುದೇವ್ ಮಾತನಾಡಿ, 108 ಎಳ್ಳು ಬತ್ತಿಯನ್ನು ದೇವಾಲಯದ ಆವರಣದಲ್ಲಿ ಹಚ್ಚಿದರೆ ದೋಷ ಪರಿಹಾರ ಆಗಲಿದೆ ಎಂಬ ನಂಬಿಕೆ ಇದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ದೇವಾಲಯದ ಭಕ್ತರಾದ ಎ.ಸಿ.ಚುಮ್ಮಿ ದೇವಯ್ಯ ಮಾತನಾಡಿ, ಜಿಲ್ಲೆ, ರಾಜ್ಯ ಹಾಗೂ ಹೊರದೇಶದಿಂದಲೂ ತಾಯಿಯ ದರ್ಶನಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ದೀಪಾವಳಿ ದೀಪೋತ್ಸವವು ಈ ಕ್ಷೇತ್ರದಲ್ಲಿ ಎರಡನೇ ಮಹೋತ್ಸವವಾಗಿದೆ ಎಂದರು. ಗೋಷ್ಠಿಯಲ್ಲಿ ದೇವಾಲಯದ ಪ್ರಮುಖರಾದ ಸೂದನ ಹರೀಶ್ ಉಪಸ್ಥಿತರಿದ್ದರು.









