
ಮಡಿಕೇರಿ NEWS DESK ಅ.17 : ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ವರ್ಗೀಕರಣವು ಸೇರಿದಂತೆ 2026-27 ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಅಳವಡಿಸಬೇಕು. ರಾಷ್ಟ್ರೀಯ ಜನಗಣತಿಯ ಸಂದರ್ಭ ಎಲ್ಲಾ ಮೂರು ಕಾಲಂನಲ್ಲಿ “ಕೊಡವ” ಎಂದೇ ಬರೆಸಬೇಕೆಂಬ ಕರೆಯೂ ಸೇರಿದಂತೆ ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಅ.21 ರಂದು ಉಮ್ಮತ್ ನಾಡಿನ ಅಮ್ಮತ್ತಿಯಲ್ಲಿ 16ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಅಮ್ಮತ್ತಿಯಲ್ಲಿ ಶಾಂತಿಯುತವಾಗಿ ಮಾನವ ಸರಪಳಿ ನಿರ್ಮಿಸಿ ಕೊಡವ ಲ್ಯಾಂಡ್ ಸೇರಿದಂತೆ ಕೊಡವರ ಎಲ್ಲಾ ಸಂವಿಧಾನಿಕ ಹಕ್ಕೊತ್ತಾಯಗಳ ಕುರಿತು ಹಕ್ಕೊತ್ತಾಯ ಮಂಡಿಸಲಾಗುವುದು. 2026 ಅಕ್ಟೋಬರ್ ನಿಂದ ಕೇಂದ್ರ ಸರಕಾರದ ಮೂಲಕ ನಡೆಯಲಿರುವ ಭಾರತ ದೇಶದ 16ನೇ ರಾಷ್ಟ್ರೀಯ ಜನಗಣತಿಯ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಅಳವಡಿಸುವುದರಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳ ಮಹತ್ವದ ಕುರಿತಾಗಿ ವಿವರಿಸಲಾಗುವುದು ಎಂದು ಹೇಳಿದ್ದಾರೆ. ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿರುವ ಈ ಜನಗಣತಿಯು ಕೊಡವರ ರಾಜಕೀಯ ಸಬಲೀಕರಣ, ಸ್ವಯಂ ನಿರ್ಧಾರದ ಹಕ್ಕು ಸ್ಥಾಪಿಸಲು ಮೆಟ್ಟಿಲಾಗಲಿದೆ. ಅಲ್ಲದೆ ಕೊಡವರ ಧಾರ್ಮಿಕ ಸಂಸ್ಕಾರ ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರಿಯಲು ಪೂರಕವಾಗಲಿದೆ. 2026-27ರ 16ನೇ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ “ಕೋಡ್” ಹಾಗೂ “ಕಾಲಮ್” ಅಳವಡಿಸಬೇಕು, ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು, ಸಂವಿಧಾನದಡಿ ಕೊಡವರನ್ನು ಎಸ್‌ಟಿ ಪಟ್ಟಿಯಲ್ಲಿ ವರ್ಗೀಕರಿಸಬೇಕು. ಕೊಡವರ ಧಾರ್ಮಿಕ ಸಂಸ್ಕಾರ ತೋಕ್ ಗನ್ ಹಕ್ಕು ಚಿರಸ್ಥಾಯಿಯಾಗಿ ಉಳಿಸಬೇಕು, ಸಿಕ್ಕಿಂನ ಬೌದ್ಧ ಸನ್ಯಾಸಿಗಳಿಗೆ ನೀಡಿದ “ಸಂಘ” ಕ್ಷೇತ್ರದಂತೆಯೇ 2026-27 ರ ಮತಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದ ಸಂದರ್ಭ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇಷ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ವಿಶ್ವರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನಡಿ ಆದಿಮಸಂಜಾತ (ಆನಿಮಿಸ್ಟಿಕ್) ಕೊಡವ ಸಮುದಾಯವನ್ನು ಸಂರಕ್ಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯಲಾಗುವುದು. ಅಲ್ಲದೆ ಜಾತಿ ಜನಗಣತಿಯ ಕಾಲಂಗಳಲ್ಲಿ ಕೊಡವರು (ಕೊಡವ) ಎಂದು ನಮೂದಿಸುವಂತೆ ಜನಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ. ಕೊಡವ ಸಮುದಾಯದ ಹಕ್ಕೊತ್ತಾಯಗಳಿಗೆ ಮತ್ತು ಜಾಗೃತಿ ಮೂಡಿಸುವುದಕ್ಕಾಗಿ ಮಾನವ ಸರಪಳಿ ಕಾರ್ಯಕ್ರಮವು ಶಾಂತಿಯುತವಾಗಿ ನಡೆಯಲಿದ್ದು, ಅಮ್ಮತ್ತಿ ಭಾಗದ ಕೊಡವ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.








