
ಮಡಿಕೇರಿ ಅ.27 NEWS DESK : ಕೊಡಗಿನ ಪ್ರತಿಷ್ಠಿತ ಕುಟುಂಬಗಳಲ್ಲಿ ಒಂದಾಗಿರುವ ಅಜ್ಜಿಕುಟ್ಟಿರ ಐನ್ ಮನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು. ಕಳೆದ ವರ್ಷ ಅಜ್ಜಿಕುಟ್ಟಿರ ಐನ್ ಮನೆ ಕಾಮಗಾರಿಯನ್ನು ಕೈಗೆತ್ತುಕೊಂಡಿದ್ದ ಕುಟುಂಬಸ್ಥರು, ಇದೀಗ ಕಾಮಗಾರಿ ಪೂರ್ಣಗೊಂಡು, ಇಂದು ಶಾಸ್ತ್ರೋತ್ರವಾಗಿ ಐನ್ ಮನೆ ಕುಟುಂಬದ ತಕ್ಕರು, ಹಿರಿಯರು, ಪ್ರಮುಖರು ಹಾಗೂ ಊರವರ ಉಪಸ್ಥಿತಿಯಲ್ಲಿ ಐನ್ ಮನೆ ಪ್ರವೇಶ ಕಾರ್ಯಕ್ರಮ ಜರುಗಿತು. ಸ್ವತಹ ಅಜ್ಜಿಕುಟ್ಟಿರ ಕುಟುಂಬದ ಕುಡಿ ಆಗಿರುವ ಶಾಸಕರು ತನ್ನ ಹಿರಿಕರು ನೆಲೆಸಿದ ಐನ್ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸುವುದರೊಂದಿಗೆ, ಅಲ್ಲಿಯ ಹಿರಿಯರೊಂದಿಗೆ ಹಲವು ಸಮಯ ಚರ್ಚಿಸಿದರು.
ಈ ಸಂದರ್ಭ ಅಜ್ಜಿಕುಟ್ಟಿರ ಕುಟುಂಬದ ಇತಿಹಾಸದ ಬಗ್ಗೆ ಮೆಲುಕು ಹಾಕಿದ ಶಾಸಕರು, ಕುಟುಂಬದ ಆಚರಣೆ, ಆಚಾರ ವಿಚಾರಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಕುಟುಂಬದ ಅಧ್ಯಕ್ಷರಾದ ಸಜಾನ್, ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ, ಶಾಸಕರ ಹಿರಿಯ ಸಹೋದರ ಅಜ್ಜಿಕುಟ್ಟಿರ ನರೇನ್ ಎಸ್.ಕಾರ್ಯಪ್ಪ, ಕುಟುಂಬದ ಹಿರಿಯರಾದ ಪೊನ್ನಪ್ಪ, ಮಾದಪ್ಪ, ಪೂಣಚ್ಚ ಹಾಗೂ ಕುಟುಂಬದ ಸರ್ವ ಸದಸ್ಯರು ಉಪಸ್ಥಿತರಿದ್ದರು.









