
ಸೋಮವಾರಪೇಟೆ ಅ.27 NEWS DESK : ರೈತರ ಸಂಕಷ್ಟಕ್ಕೆ ನೆರವಾಗುವನಿಟ್ಟಿನಲ್ಲಿ ರೈತ ವಿಜ್ಞಾನಿಯಾಗುವ ಹಂಬಲ ವ್ಯಕ್ತಪಡಿಸಿದ ವಿದ್ಯಾರ್ಥಿ ಬಿ.ಎಂ.ಸೃಜನ್. ಇತೀಚೆಗೆ ನಡೆದ ಕೃಷಿ ಸಂಶೋದನಾ ಅರ್ಹತಾ ಪರೀಕ್ಷೆಯಲ್ಲಿ ದೇಶಕ್ಕೆ 34ನೇ ರ‍್ಯಾಂಕ್ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪೈಕಿ 18ನೆ ರ‍್ಯಾಂಕ್ ಪಡೆದು ಸಾಧನೆ ತೋರಿದ್ದ ಸೃಜನ್ ಇದೀಗ ರಾಷ್ಟ್ರದ ಪ್ರತಿಷ್ಠಿತ ದೆಹಲಿಯಲ್ಲಿರುವ ಭಾರತೀಯ ಕೃಷಿ ಸಂಶೋದನಾ ಸಂಸ್ಥೆಯಲ್ಲಿ ಸೀಟು ಪಡೆದಿದ್ದಾನೆ. ತನ್ನ ಮುಂದಿನ ಗುರಿಯ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸೃಜನ್ ರೈತರು, ಕೃಷಿಕರ ಬಗ್ಗೆ ಅಪಾರ ಕಾಳಜಿ ತೋರಿದ್ದಾರೆ. ಇಂದು ರೈತಾಪಿ ವರ್ಗ ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ಸೃಜನ್, ರೈತರ ಸಂಕಷ್ಟಕ್ಕೆ ನೆರವಾಗಬೇಕಾಗಿದೆ ಅದಕ್ಕಾಗಿ ನಾನು ರೈತ ವಿಜ್ಞಾನಿಯಾಗಬೇಕು ಎಂದು ಹಂಬಲ ವ್ಯಕ್ತಪಡಿಸಿದರು. ವಿಶೇಷವಾಗಿ ಹೊಸ ತಳಿಗಳ ಆವಿಷ್ಕಾರ ಹಾಗೂ ರೋಗಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡುಹಿಡಿಯಬೇಕಾಗಿದೆ ಎಂದರು. ಸ್ನಾತಕೋತ್ತರ ಪದವಿಗೆ ಅರ್ಹತೆ ಪಡೆಯಲು ಕಷ್ಟಪಟ್ಟು ಅಭ್ಯಾಸ ಮಾಡಿ ಇದೀಗ ಸೀಟು ಪಡೆಯಲು ಸಾಧ್ಯವಾಯಿತು. ಮುಂದೆ ನನಗೆ ಗುರಿ ಮತ್ತು ಸವಾಲು ಎರೆಡು ಇದೇ ಎಂದ ಸೃಜನ್ ತನ್ನ ಈ ಸಾಧನೆಗೆ ಮನೆಯ ಎಲ್ಲರ ಸಹಕಾರ ಇತ್ತು ವಿಶೇಷವಾಗಿ ನನ್ನ ತಾಯಿ ಇಂದಿರಾ ಸಾಕಷ್ಟು ಶ್ರಮಪಟ್ಟಿದ್ದಾರೆ ಎಂದರು. ಸೃಜನ್ ಪಟ್ಟಣದ ಬಸ್ಸ್ ಚಾಲಕ ಮೋನಪ್ಪ ಹಾಗೂ ಶ್ರೇಯಾ ಬಟ್ಟೆ ಅಂಗಡಿ ಮಾಲಕಿ (ಸೋಮವಾರಪೇಟೆ ಮಂಡಲ ಬಿಜೆಪಿ ಕಾರ್ಯದರ್ಶಿ)ಇಂದಿರಾ ದಂಪತಿಗಳ ಪುತ್ರ. ಶ್ರೇಯಸ್ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಮೈಸೂರು ತೋಟಗಾರಿಕಾ ಕಾಲೇಜಿನಲ್ಲಿ ಬಿ.ಎಸ್.ಸಿ (ಹಾನರ್ಸ)ವ್ಯಾಸಾಂಗ ಮಾಡಿದ್ದು, ಕಳೆದ ಜುಲೈ ತಿಂಗಳಿನಲ್ಲಿ ನಡೆದ ಕೃಷಿ ಸಂಶೋದನಾ ಸ್ನಾತಕೋತ್ತರ ಅರ್ಹತಾ ಪರೀಕ್ಷೆಯಲ್ಲಿ ದೇಶದ ಒಟ್ಟು 42 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಸೃಜನ್ 34ನೇ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಲ್ಲಿ 18ನೇ ರ‍್ಯಾಂಕ್ ಪಡೆಯುವ ಮೂಲಕ ಅಪ್ರತಿಮ ಸಾಧನೆ ತೋರಿದ್ದಾರೆ.









