
ಮಡಿಕೇರಿ ಅ.27 NEWS DESK : ಕೊಡವ ಕುಟುಂಬಗಳ ನಡುವಣ ಮುಂದಿನ ಸಾಲಿನ ‘ಚೇನಂಡ ಕಪ್ ಹಾಕಿ ಉತ್ಸವ’ಕ್ಕೆ 450ಕ್ಕೂ ಹೆಚ್ಚಿನ ಕೊಡವ ಕುಟುಂಬ ತಂಡಗಳು ಪಾಲ್ಗೊಳ್ಳುವಂತೆ ಮಾಡುವ ಗುರಿಯೊಂದಿಗೆ, ಅತ್ಯಂತ ವಿಶಿಷ್ಟವಾಗಿ ಉತ್ಸವವನ್ನು ಹಾಕಿ ಆಚರಿಸಲು ಉದ್ದೇಶಿಸಲಾಗಿದೆಯೆಂದು ಹಾಕಿ ಉತ್ಸವ ಆಯೋಜಕ ಸಮಿತಿಯ ಪದಾಧಿಕಾರಿಗಳು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದ ಚೇನಂಡ ಕಪ್ ಹಾಕಿ ಉತ್ಸವ ಆಯೋಜಕ ಸಮಿತಿಯ ಕಾರ್ಯದರ್ಶಿ ಸಿ.ಎಸ್. ಮಧು ದೇವಯ್ಯ, ನಾಪೋಕ್ಲುವಿನಲ್ಲಿ ಮುಂದಿನ 2026ನೇ ಸಾಲಿನ ಏ.5ರಿಂದ ಮೇ 2ರವರೆಗೆ 26ನೇ ಸಾಲಿನ ಚೇನಂಡ ಕಪ್ ಹಾಕಿ ಉತ್ಸವ ನಡೆಯಲಿದೆ. ಈ ಹಿಂದೆ 2024 ರಲ್ಲಿ ಆಯೋಜಿತ ಕುಂಡ್ಯೋಳಂಡ ಕುಟುಂಬದ ಹಾಕಿ ಉತ್ಸವವು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದ್ದರೆ, ಈ ಸಾಲಿನಲ್ಲಿ ನಡೆದ ಮುದ್ದಂಡ ಕಪ್ ಹಾಕಿ ಉತ್ಸವ ಬುಕ್ ಆಫ್ ವಲ್ರ್ಡ್ ರೆಕಾರ್ಡ್‍ನಲ್ಲಿ ಸೇರ್ಪಡೆಯಾಗಿದೆ. ಚೇನಂಡ ಕಪ್ ಹಾಕಿ ಉತ್ಸವದಲ್ಲಿ ಈ ಹಿಂದಿನ ಉತ್ಸವಗಳಲ್ಲಿನ ಮಹತ್ವದ ಕಾರ್ಯಕ್ರಮಗಳನ್ನು ಮುಂದುವರೆಸುವುದರೊಂದಿಗೆ, ಮತ್ತಷ್ಟು ವಿಶೇಷವಾಗಿ ನಡೆಸುವ ಪ್ರಯತ್ನ ತಮ್ಮದೆಂದು ತಿಳಿಸಿದರು. ಮಹಿಳಾ ವಿಭಾಗದ ಹಾಕಿ ಪಂದ್ಯಾವಳಿಗೆ 120ಕ್ಕೂ ಹೆಚ್ಚಿನ ಮಹಿಳಾ ತಂಡಗಳು ಪಾಲ್ಗೊಳ್ಳುವಂತೆ ಮಾಡುವ ಉದ್ದೇಶವಿರುವುದಾಗಿ ಹೇಳಿದರು. :: ಉತ್ಸವದ ಸಂದರ್ಭ ಇನ್ನಿತರ ಕ್ರೀಡಾಕೂಟ ನಡೆಸದಂತೆ ಮನವಿ :: ಮುಂದಿನ ಸಾಲಿನ ಏಪ್ರಿಲ್‍ನಿಂದ ಒಂದು ತಿಂಗಳ ಕಾಲ ಚೇನಂಡ ಕಪ್ ಹಾಕಿ ಉತ್ಸವ ನಡೆಯಲಿದೆ. ಈ ಅವಧಿಯಲ್ಲಿ ಕ್ರೀಡಾಪಟುಗಳ ಭಾಗವಹಿಸುವಿಕೆ, ಪ್ರೇಕ್ಷಕರ ಪಾಲ್ಗೊಳ್ಳುವಿಕೆ ಮೊದಲಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಇತರೆ ಮಹತ್ವದ ಕ್ರೀಡಾಕೂಟಗಳನ್ನು ನಡೆಸದಂತೆ ಮನವಿ ಮಾಡಿದರಲ್ಲದೆ, ಹಾಕಿ ಉತ್ಸವದ ಹಂತದಲ್ಲೆ ಕೊಡವ ಕ್ರಿಕೆಟ್ ಪಂದ್ಯಾವಳಿಯೂ ನಡೆಯುತ್ತದೆ. ಈ ಹಿನ್ನೆಲೆ ಅವರೊಂದಿಗೂ ಈ ಸಂಬಂಧ ಮಾತುಕತೆ ನಡೆಸುವುದಾಗಿ ತಿಳಿಸಿದರು. :: ನ.2 ರಂದು ಲೋಗೋ ಅನಾವರಣ :: ಹಾಕಿ ಉತ್ಸವ ಸಮಿತಿಯ ಲೆಕ್ಕಾಧಿಕಾರಿ ಚೇನಂಡ ಶ್ಯಾಮಲಾ ಚೆಂಗಪ್ಪ ಮಾತನಾಡಿ, ‘ಚೇನಂಡ ಕಪ್ ಹಾಕಿ ಉತ್ಸವ’ದ ಲಾಂಛನವನನ್ನು ನ.2 ರಂದು ಬೆಂಗಳೂರಿನ ಕೃಷ್ಣ ಸಭಾಂಗಣದಲ್ಲಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ಅನಾವರಣಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರಾದ ಪಾಂಡಂಡ ಬೋಪಣ್ಣ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. :: ಜನವರಿಯಲ್ಲಿ ಶಾಲಾ ಮಕ್ಕಳ ಪಂದ್ಯಾವಳಿ :: ಹಾಕಿ ಕ್ರೀಡೆಯಲ್ಲಿ ಆಸಕ್ತಿ ಇರುವ ಪ್ರತಿಭಾವಂತ ಮಕ್ಕಳನ್ನು ಗುರುತಿಸುವ ಉದ್ದೇಶದಿಂದ ಮುಂದಿನ ಜನವರಿಯಲ್ಲಿ ‘ಪ್ರಾಥಮಿಕ ಶಾಲೆಯಿಂದಲೆ ಹಾಕಿ ಆಟ’ ಎನ್ನುವ ಕಾರ್ಯಕ್ರಮದಡಿ, ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಎಲ್ಲಾ ಸಮೂಹದ ಮಕ್ಕಳಿಗೂ ಅವಕಾಶವನ್ನು ನೀಡಲಾಗುತ್ತ್ತದೆ. ಪಂದ್ಯಾವಳಿಯ ಮೂಲಕ ಆಯ್ಕೆಯಾದ ಪ್ರತಿಭಾವಂತ ಮಕ್ಕಳಿಗೆ ನಾಪೋಕ್ಲುವಿನಲ್ಲಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಉನ್ನತ ಮಟ್ಟದ ಹಾಕಿ ತರಬೇತಿಯನ್ನು ನುರಿತ ತರಬೇತದಾರರಿಂದ ನಾಪೋಕ್ಲುವಿನಲ್ಲಿ ನೀಡಲಾಗುತ್ತದೆಂದು ವಿವರಗಳನ್ನಿತ್ತರು. ಗೋಷ್ಠಿಯಲ್ಲಿ ಚೇನಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷರಾದ ಸಿ.ಪಿ.ಕರುಂಬಯ್ಯ, ಕಾರ್ಯಾಧ್ಯಕ್ಷರಾದ ಸಿ.ಟಿ.ಚೆಂಗಪ್ಪ, ಪದಾಧಿಕಾರಿ ಬಬಿತ ಅಯ್ಯಪ್ಪ, ನಿರ್ದೇಶಕರಾದ ನಮೃತಾ ಅಯ್ಯಣ್ಣ ಉಪಸ್ಥಿತರಿದ್ದರು.









