
ಸುಂಟಿಕೊಪ್ಪ ಅ.28 NEWS DESK : ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ 7ನೇ ಹೊಸಕೋಟೆ, ಕೆದಕಲ್, ಹೊರೂರು, ಕೊಡಗರಹಳ್ಳಿ ಕಂಬಿಬಾಣೆ ಚಿಕ್ಲಿಹೊಳೆ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಇದೀಗ ಹುಲಿ ಹೆಜ್ಜೆ ಗುರುತುಗಳು ಗೋಚರಿಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಹೊರೂರು ವ್ಯಾಪ್ತಿಯಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪ್ರತ್ಯಕ್ಷಗೊಂಡಿದೆ. ಕೊಡಗರಹಳ್ಳಿ, ಕೆದಕಲ್, ಹೊರೂರು, ಮೊದ್ದೂರು, ಕಂಬಿಬಾಣೆ, ಚಿಕ್ಲಿಹೊಳೆ, 7ನೇ ಹೊಸಕೋಟೆ ಭಾಗಗಳಲ್ಲಿ ಶಾಲೆಗಳಿದ್ದು, ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಶಾಲೆಗೆ ತೆರಳಬೇಕಾಗಿದೆ. ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಕೃಷಿಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಮುಕ್ಕಾಟಿರ ಸಂಜಪೊನ್ನಪ್ಪ ಮಾತನಾಡಿ, ಈಗಾಗಲೇ ಕಾಡಾನೆ ಹಾವಳಿಯಿಂದ ಹೈರಾಣಾಗಿದ್ದೇವೆ ಇದೀಗ ಕಳೆದ 2 ದಿನಗಳಿಂದ ನಮ್ಮ ವ್ಯಾಪ್ತಿಯಲ್ಲಿ ಹುಲಿ ಹೆಜ್ಜೆ ಪ್ರತ್ಯಕ್ಷಗೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಈ ಸಂಬ0ಧ ಕಾರ್ಯಾಚರಣೆ ನಡೆಸಿ ತೋಟಗಳಲ್ಲಿ ಬೀಡುಬಿಟ್ಟಿರುವ ವನ್ಯ ಪ್ರಾಣಿಗಳನ್ನು ಕಾಡಿಗಟ್ಟುವಂತೆ ಒತ್ತಾಯಿಸಿದ್ದಾರೆ.









