
ವಿರಾಜಪೇಟೆ ನ.22 NEWS DESK : ಚೆಯ್ಯಂಡಾಣೆಯ ಕೊಕೇರಿ “ನೀಲಿಯತ್ ಲೇಡೀಸ್ ಕ್ಲಬ್” ವತಿಯಿಂದ ಆಯೋಜಿಸಿದ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಚೆಯ್ಯಂಡಾಣೆಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಸಮಾಜದ ಎಲ್ಲಾ ಚಟುವಟಿಕೆಗಳಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿರುವುದು ಸಮಾಜದ ಏಳಿಗೆಗೆ ಉತ್ತಮವಾದ ಬೆಳವಣಿಗೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಎಲ್ಲಾ ರೀತಿಯ ಕ್ರೀಡೆಗಳಲ್ಲಿ ಮಹಿಳೆಯರ ಸಾಧನೆ ಅತ್ಯಂತ ಶ್ಲಾಘನೀಯವಾಗಿ ಮೂಡಿ ಬರುತ್ತಿದೆ. ವಿಶೇಷವಾಗಿ ಕ್ರೀಡೆಗೆ ಹೆಸರುವಾಸಿಯಾಗಿರುವ ನಮ್ಮ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಹಿಳೆಯರು/ಯುವತಿಯರು ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವುದು ನಾಡಿಗೆ ಮಾತ್ರ ಅಲ್ಲ ದೇಶಕ್ಕೆ ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು. ಇಂದಿನ ಈ ಮಹಿಳಾ ಕ್ರಿಕೆಟ್ ಪಂದ್ಯಾಟ ಇಂತಹದೇ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಪೆಮ್ಮಂಡ ನಂದ ನಾಣಯ್ಯ, ಪಂಚಾಯಿತಿ ಅಧ್ಯಕ್ಷರು ಪೆಮ್ಮಂಡ ಕೌಶಿ ಕಾವೇರಮ್ಮ, ಉಪಾಧ್ಯಕ್ಷರು ಕೋಡಿರ ವಿನೋದ್ ನಾಣಯ್ಯ, ಸದಸ್ಯರು ಸುಬೈರ್, ಮಮ್ಮದ್, ಶೈಲಾ ಕುಟ್ಟಪ್ಪ, ಪ್ರಕಾಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.









