
ಮಡಿಕೇರಿ ನ.28 NEWS DESK : ಡಿಸೆಂಬರ್ 9 ರಿಂದ 14 ರವರೆಗೆ ಚೆನ್ನೈನಲ್ಲಿ ಸ್ಮಾಶ್ ವಿಶ್ವಕಪ್ ನಡೆಯಲಿದ್ದು ಮೂಲತಃ ಕೊಡಗಿನವರಾದ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಟೂರ್ನಿಯಲ್ಲಿ ಇರಾನ್, ಜಪಾನ್, ಮಲೇಷಿಯಾ, ರಿಪಬ್ಲಿಕ್ ಆಫ್ ಕೊರಿಯಾ, ಹಾಂಗ್ ಕಾಂಗ್, ಚೀನಾ, ಈಜಿಪ್ಟ್, ದಕ್ಷಿಣ ಆಫ್ರಿಕಾ, ಪೋಲ್ಯಾಂಡ್, ಸ್ವಿಟ್ಟರ್ ಲ್ಯಾಂಡ್, ಆಸ್ಟ್ರೇಲಿಯಾ ಹಾಗೂ ಬ್ರೆಸಿಲ್ ತಂಡಗಳು ಭಾಗವಹಿಸಲಿವೆ. ಭಾರತವನ್ನು ಜೋಶ್ನಾ ಸೇರಿದಂತೆ ಅನಾಹತ್ ಸಿಂಗ್, ಅಭಯ್ ಸಿಂಗ್, ವೆಲಾವನ್ ಎಸ್ ಅವರುಗಳು ಪ್ರತಿನಿಧಿಸಲಿದ್ದಾರೆ. ಚೆನ್ನೈನಲ್ಲಿ ಭಾರತ ತಂಡದ ವಿಶ್ವಕಪ್ ಜರ್ಸಿ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶ್ನಾ ಅವರು, 2028ರಲ್ಲಿ ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಂಪಿಕ್ಸ್‌ನಲ್ಲಿ ಆಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಸ್ಕ್ವಾಶ್ ಆಟ ಇದೇ ಮೊದಲ ಬಾರಿಗೆ ಒಲಂಪಿಕ್ಸ್‌ನಲ್ಲಿ ಸ್ಥಾನ ಪಡೆದಿದ್ದು, ಚಿಕ್ಕಂದಿನಿಂದಲೇ ಒಲಂಪಿಕ್ಸ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬ ಕನಸು ಕಂಡಿದ್ದ ಜೋಶ್ನಾ ಅವರು ಆಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಜೋಶ್ನಾ ಅವರು 22 ವರ್ಷಗಳ ಕಾಲ ವೃತ್ತಿಪರ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ದೇಹದ ಫಿಟೈಸ್ ಅನುಮತಿಸಿದರೆ ಒಲಂಪಿಕ್ಸ್‌ನಲ್ಲಿ ಆಡುವುದಾಗಿ ಹೇಳಿದ್ದಾರೆ. ಆದರೆ ಸದ್ಯದ ಮಟ್ಟಿಗೆ ವಿಶ್ವಕಪ್ ಹಾಗೂ ಮುಂಬರುವ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸುವುದಕ್ಕೆ ಸಿದ್ಧತೆ ನಡೆಸುವುದಕ್ಕೆ ಆದ್ಯತೆ ನೀಡುವುದಾಗಿಯೂ ಹೇಳಿದ್ದಾರೆ.








