
ನಾಪೋಕ್ಲು ಡಿ.1 NEWS DESK : ಹದಗೆಟ್ಟ ರಸ್ತೆಯ ಗುಂಡಿಗಳನ್ನು ಮುಚ್ಚುವ ಮೂಲಕ ಕೊಟ್ಟಮುಡಿಯ ಜೀನತ್ ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೊಟ್ಟಮುಡಿ ಇಂದ ಕಾವೇರಿ ನದಿ ಸೇತುವೆಯವರೆಗೆ ಹದಗೆಟ್ಟ ರಸ್ತೆಯಲ್ಲಿ ಶ್ರಮದಾನ ನಡೆಸಿ, ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಮಡಿಕೇರಿ – ನಾಪೋಕ್ಲು ಮುಖ್ಯ ರಸ್ತೆಯಲ್ಲಿ ಕೊಟ್ಟಮುಡಿ ಇಂದ ಕಾವೇರಿ ನದಿ ಸೇತುವೆಯವರೆಗೆ ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ತೊಡಕು ಉಂಟಾಗಿತ್ತು. ಅಪಘಾತಗಳು ಹೆಚ್ಚಾಗುತ್ತಿತ್ತು. ಈ ನಿಟ್ಟಿನಲ್ಲಿ ರಸ್ತೆ ದುರಸ್ತಿಗೆ ಒತ್ತಾಯಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ರಸ್ತೆ ದುರಸ್ತಿಗೆ ಅಧಿಕಾರಿಗಳ ಸ್ಪಂದನೆ ಸಿಗದಿದ್ದರಿಂದ ಕೊಟ್ಟ ಮುಡಿಯ ಜೀನತ್ ಯುವಕ ಸಂಘದ ಪದಾಧಿಕಾರಿಗಳು ತಮ್ಮ ವಾಹನದಲ್ಲೇ ಮಣ್ಣು ತಂದು ರಸ್ತೆ ಹುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾದರು. ಗುಂಡಿಗಳಿಗೆ ಮಣ್ಣು ಕಲ್ಲು ತುಂಬಿ ದುರಸ್ತಿ ಕಾರ್ಯ ನಡೆಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಶ್ರಮದಾನದಲ್ಲಿ ಕೊಟ್ಟಮುಡಿಯ ಜೀನತ್ ಯುವಕ ಸಂಘದ ಅಧ್ಯಕ್ಷ ಶೌಕತ್ ಆಲಿ ಕೆ.ಎಚ್, ಉಪಾಧ್ಯಕ್ಷ ನೌಶದ್ ಹೆಚ್.ಎಂ, ಕಾರ್ಯದರ್ಶಿ ರಹಿಂ ಕೆ.ಎ, ಸಹ ಕಾರ್ಯದರ್ಶಿ ಮಹಮ್ಮದ್ ಕೆ.ಕೆ. ಹಾಗೂ ಇತರ ಪದಾಧಿಕಾರಿ ಸದಸ್ಯರು ಪಾಲ್ಗೊಂಡಿದ್ದರು..
ವರದಿ : ದುಗ್ಗಳ ಸದಾನಂದ.









