
ಮಡಿಕೇರಿ ಡಿ.1 NEWS DESK : ಮುಕ್ಕಾಟಿರ(ಬೇತ್ರಿ) ಕುಟುಂಬದ ವತಿಯಿಂದ ಕೊಡವ ಕುಟುಂಬಗಳ ನಡುವಣ 24ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವ ‘ಮುಕ್ಕಾಟಿರ ಕಪ್ ಕ್ರಿಕೆಟ್-2026′ ಮುಂದಿನ ಏಪ್ರಿಲ್ 2 ರಿಂದ ಮೂರ್ನಾಡಿನಲ್ಲಿ ನಡೆಯಲಿದೆ ಎಂದು ಕ್ರಿಕೆಟ್ ಆಯೋಜನಾ ಸಮಿತಿಯ ಅಧ್ಯಕ್ಷ ಮುಕ್ಕಾಟಿರ ಸುರೇಶ್ ಪೆಮ್ಮಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದ ಅವರು, ಮುಕ್ಕಾಟಿರ ಕಪ್ ಕ್ರಿಕೆಟ್ ಉತ್ಸವ ಮೂರ್ನಾಡಿನ ಲಾಲೂ ಮುದ್ದಯ್ಯ ಕ್ರೀಡಾಂಗಣ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮೈದಾನ ಹಾಗೂ ಅರಮೇರಿ ಕಳಂಚೇರಿಯ ಎಸ್‍ಎಂಎಸ್ ವಿದ್ಯಾಪೀಠದ ಮೈದಾನಗಳಲ್ಲಿ ಏ.2 ರಿಂದ 28 ದಿನಗಳ ಕಾಲ ನಡೆಯಲಿದೆ ಎಂದರು. *400 ತಂಡಗಳ ನಿರೀಕ್ಷೆ* ಕಳೆದ ಸಾಲಿನ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವದ ಪುರುಷರ ವಿಭಾಗದಲ್ಲಿ 280 ತಂಡಗಳು ಪಾಲ್ಗೊಂಡಿದ್ದುವಾದರೆ, ಈ ಬಾರಿ 300 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಳೆದ ಬಾರಿ ಮಹಿಳೆಯರ ವಿಭಾಗದಲ್ಲಿ 58 ತಂಡಗಳು ಪಾಲ್ಗೊಂಡಿದ್ದರೆ, ಈ ಬಾರಿ 100 ತಂಡಗಳು ಪಾಲ್ಗೊಳ್ಳಬಹುದಾಗಿದ್ದು, ಒಟ್ಟಾಗಿ ಈ ಬಾರಿ 400 ತಂಡಗಳ ಪಾಲ್ಗೊಳ್ಳುವಿಕೆಯನ್ನು ಎದುರು ನೋಡಲಾಗುತ್ತಿದೆಯೆಂದು ತಿಳಿಸಿದರು. ಪಂದ್ಯಾವಳಿಯ ಕ್ವಾರ್ಟರ್ ಫೈನಲ್‍ವರೆಗೆ 6 ಓವರ್‍ಗಳ ಪಂದ್ಯಾಟಗಳು ನಡೆಯಲಿದ್ದು, ಬಳಿಕ 8 ಓವರ್ ಪಂದ್ಯಾಟಗಳು ನಡೆಯಲಿದೆ. ಅಂತಿಮ ಪಂದ್ಯಾಟ ಮೂರ್ನಾಡಿನ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು. *ಉತ್ಸವ ಆಯೋಜನಾ ಸಮಿತಿ* ಮುಕ್ಕಾಟಿರ ಕಪ್ ಕ್ರಿಕೆಟ್ ಉತ್ಸವದ ಯಶಸ್ವಿ ಆಯೋಜನೆಗಾಗಿ ನನ್ನ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಕಾರ್ಯದರ್ಶಿಯಾಗಿ ಮುಕ್ಕಾಟಿರ ಪೊನ್ನಣ್ಣ, ಜಂಟಿ ಕಾರ್ಯದರ್ಶಿಯಾಗಿ ಸಂಜು ಸೋಮಣ್ಣ, ಉಪಾಧ್ಯಕ್ಷರುಗಳಾಗಿ ಕಿಟ್ಟು ಮುತ್ತಣ್ಣ, ರವಿ ಕುಮಾರ್, ವಕ್ತಾರರಾಗಿ ರವಿ ಚೀಯಣ್ಣ, ಖಜಾಂಚಿಯಾಗಿ ಪ್ರಿಯಾ ಗಣಪತಿ, ಜಂಟಿ ಖಜಾಂಚಿಯಾಗಿ ಮುಖೇಶ್ ಅಯ್ಯಪ್ಪ, ಪಂದ್ಯಾವಳಿಯ ಸಂಚಾಲಕರಾಗಿ ಕ್ಯಾರಿ ಕರುಂಬಯ್ಯ, ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಉತ್ತಮ್ ಬೋಪಣ್ಣ, ಕುಟುಂಬದ ಅಧ್ಯಕ್ಷರಾದ ಮಧು ದೇವಯ್ಯ, ಕಾರ್ಯದರ್ಶಿ ಭಜನ್ ಬೋಪಣ್ಣ ಹಾಗೂ ಸದಸ್ಯರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. *ಲೋಗೋ ಅನಾವರಣ* ಇದೇ ಸಂದರ್ಭ ಮುಕ್ಕಟಿರ ಕಪ್ ಕ್ರಿಕೆಟ್ ಉತ್ಸವ ಲೋಗೋವನ್ನು ಪಂದ್ಯಾವಳಿ ಆಯೋಜನಾ ಸಮಿತಿಯ ಪ್ರಮುಖರು ಬಿಡುಗಡೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿ ಆಯೋಜನಾ ಸಮಿತಿಯ ಕಾರ್ಯದರ್ಶಿ ಪೊನ್ನಣ್ಣ, ವಕ್ತಾರ ರವಿ ಚೀಯಣ್ಣ ಹಾಗೂ ಜಂಟಿ ಖಜಾಂಚಿ ಮುಖೇಶ್ ಅಯ್ಯಪ್ಪ ಉಪಸ್ಥಿತರಿದ್ದರು.









