
ಮಡಿಕೇರಿ ಡಿ.15 NEWS DESK : ಕೊಡವರ ಕುರಿತು ಸುಳ್ಳು ಚರಿತ್ರೆಗಳನ್ನು ಸೃಷ್ಟಿಸುವ ಮೂಲಕ ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವ ಸಮುದಾಯದ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇದರ ವಿರುದ್ಧ ಕೊಡವರು ಜಾಗೃತರಾಗಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕರೆ ನೀಡಿದ್ದಾರೆ. 2026-27ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು ಪ್ರತ್ಯೇಕವಾಗಿ `ಕೊಡವ’ ಎಂದು ದಾಖಲೀಕರಣಗೊಳ್ಳುವಂತೆ ಜನಜಾಗೃತಿ ಮೂಡಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ತಿತಿಮತಿಯಲ್ಲಿ ನಡೆದ 22ನೇ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಅನೇಕ ವರ್ಷಗಳಿಂದ ಕೊಡವರ ಹಕ್ಕುಗಳ ಮೇಲೆ ಆಗುತ್ತಿರುವ ದಾಳಿಯನ್ನು ನಾವು ಸಹಿಸಿಕೊಂಡೇ ಬಂದಿದ್ದೇವೆ. ನಮ್ಮ ಹಕ್ಕನ್ನು ಕಸಿದುಕೊಳ್ಳುವವರಿಗೆ ಸರಕಾರ ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಬೆಂಬಲವನ್ನು ನೀಡುತ್ತಾ ಬಂದಿದೆ, ಸರಕಾರ ಈ ನಾಡಿನ ಬಹುಸಂಖ್ಯಾತರ ಪರವಾಗಿದೆ ಎಂದು ಆರೋಪಿಸಿದರು. 1970ರ ನಂತರ ಈ ರೀತಿಯ ಸುಳ್ಳು ಚರಿತ್ರೆಗಳನ್ನು ಕೊಡವರು ಅಥವಾ ಬೇರೆ ಯಾರೇ ಬರೆದಿದ್ದರೂ ಕನಿಕರ ತೋರದೆ ಅದನ್ನು ಬೆಂಕಿಗೆ ಹಾಕಿ ಅಥವಾ ಕಾವೇರಿ ನದಿಗೆ ಹಾಕಿ ನಾಶ ಮಾಡಿ. ಕೊಡವ ಲ್ಯಾಂಡ್ ಗಾಗಿ ಒತ್ತಾಯಿಸಿ ಮತ್ತು ಕೊಡವರ ಕುರಿತು ಸುಳ್ಳು ಚರಿತ್ರೆ ಸೃಷ್ಟಿಯ ವಿರುದ್ಧ ಜನವರಿ ತಿಂಗಳಿನಿಂದ ಜಿಲ್ಲೆಯಾದ್ಯಂತ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದರು.
ಕಳೆದ 40 ವರ್ಷಗಳಿಂದ ಕೊಡವರ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಕೊಡಗು ಹಾಗೂ ಈ ದೇಶಕ್ಕೆ ಕೊಡವರ ಕಾಣಿಕೆ ಏನೇನೂ ಇಲ್ಲ ಎಂದು ಪ್ರತಿಬಿಂಬಿಸುವ ಮೂಲಕ ಕೊಡವರನ್ನು ಖಳನಾಯಕರಂತೆ ತೋರಿಸುವ ಕ್ರೂರ ಹುನ್ನಾರ ಮುಂದುವರೆದಿದೆ. ಕೊಡವ ಲ್ಯಾಂಡ್ ಗಾಗಿ ಒತ್ತಾಯಿಸಿ ಮತ್ತು ಕೊಡವರ ಕುರಿತು ಸುಳ್ಳು ಚರಿತ್ರೆ ಸೃಷ್ಟಿಯ ವಿರುದ್ಧ ಜನಜಾಗೃತಿ ಮೂಡಿಸಲಾಗುವುದು. ಜಿ.ರಿಚರ್ ಬರೆದ `ಕೂರ್ಗ್ ಗೆಜಿಟಿಯರ್’, ಡಿ.ಎನ್.ಕೃಷ್ಣಯ್ಯ ಅವರು ಬರೆದ `ಕೊಡಗಿನ ಇತಿಹಾಸ’, ಕೃಷ್ಣಮೂರ್ತಿ ಅವರು ಬರೆದ `ಪ್ರಾಚ್ಯ ಇತಿಹಾಸ ದಾಖಲೆ’, ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಬರೆದ `ಚಿಕ್ಕವೀರ ರಾಜೇಂದ್ರ’, ಐಪಿಎಸ್ ಅಧಿಕಾರಿ ಡಾ.ಬಿ.ಎಸ್.ರಾಮಾನುಜಂ ಅವರು ಬರೆದ `ಕೊಡವರು’, ಡಾ.ಐ.ಎಂ.ಮುತ್ತಣ್ಣ ಅವರು ಬರೆದ `ದಿ ಡೈನೀಸ್ ಮಾಡಲ್ ಸ್ಟೇಟ್ ಆಫ್ ಸೌತ್ ಇಂಡಿಯಾ ಮತ್ತು ಟಿಪ್ಪು ಸುಲ್ತಾನ್ ಎಕ್ಸ್ ರೈಡ್’, ಬಾಚಮಡ ಗಣಪತಿ ಅವರು ಬರೆದ `ಕೊಡವರ ಮೂಲ’ ಹಾಗೂ ಡಾ.ಕೊಡವಂಡ ಅಪ್ಪಯ್ಯ ಅವರು ಬರೆದ `ಕೊಡವರ ಕುಲಚಾರ ತತ್ವೋಪಜೀವಿನ’ ಸಾಹಿತ್ಯದಲ್ಲಿ & ಜಿ ಯದುಮಣಿ ವಿರಚಿತ “ನಂಗ ಕೊಡವ” ಮತ್ತು ಪಂಜೆಮಂಗೇಶರಾಯರು ರಚಿಸಿದ “ಪುತ್ತರಿ ಪಾಟ್‍ನಲ್ಲಿ” ಆದಿಮಸಂಜಾತ, ಇಂಡಿಜಿನಸ್, ಆನಿಮಿಸ್ಟಿಕ್ ನಂಬಿಕೆಯ ಏಕ ಜನಾಂಗೀಯ ಕೊಡವರು ಈ ದೇಶಕ್ಕೆ ಹಾಗೂ ಕೊಡವ ಲ್ಯಾಂಡ್ ಗೆ ನೀಡಿದ ನೈಜ ಕಾಣಿಕೆ, ಕೊಡವರ ಪರಾಕ್ರಮ, ಅರ್ಪಣಾ ಮನೋಭಾವ, ತ್ಯಾಗ, ಉದಾರ ಗುಣಗಳ ಸತ್ಯದರ್ಶನವಾಗಿದೆ. ಆದರೆ ಹಂಪಿ ವಿವಿಯ ಚರಿತ್ರಾಕಾರರೊಬ್ಬರು ಕೊಡವರ ಚರಿತ್ರೆಯನ್ನು ಕೊಡವರಿಂದಲೇ ವಿಕೃತವಾಗಿ ಬರೆಸಿ ನೈಜ ಚಿತ್ರಣವನ್ನು ಮರೆಮಾಚಿಸುತ್ತಿದ್ದಾರೆ. ಮಂಗಳೂರಿನ ಒಬ್ಬರು ಹಾಗೂ ಬೆಂಗಳೂರಿನ ಮೂವರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಪಿಹೆಚ್‍ಡಿ ಪದವಿಯ ಕೊಡವ ಯುವಕ ಹಾಗೂ ಯುವತಿಯರ ಮೂಲಕ ಸುಳ್ಳು ಚರಿತ್ರೆಯನ್ನು ಸೃಷ್ಟಿಸಿ ಕಳಂಕ ತರಲಾಗುತ್ತಿದೆ ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ಬಂದೂಕು ಹಕ್ಕಿನ ಕುರಿತು ಪ್ರಶ್ನೆ ಮಾಡಿ ವಿಕೃತಿ ಮೆರೆಯಲಾಗಿದೆ. ಈ ವಿದ್ವಾಂಸಕ ಕೂಟವು ಆ್ಯನಿಮಿಸ್ಟಿಕ್ ನಂಬಿಕೆಯ ಆದಿಮಸಂಜಾತ ಏಕಜನಾಂಗೀಯ ಕೊಡವ ಪರಂಪರೆಯ ಮೇಲೆ ಅನ್ಯರನ್ನು ಪರಕಾಯ ಪ್ರವೇಶ ಮಾಡಲು ನಿರಂತರ ಪ್ರಚೋದಿಸುತ್ತ ಕ್ಷೋಭೆ ನಿರ್ಮಾಣ ಮಾಡಲು ಯತ್ನಿಸುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಸಂಸತ್ ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕು. ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಧಾರ್ಮಿಕ ಸಂಸ್ಕಾರ ತೋಕ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕು ಸೇರಿದಂತೆ ಹಲವು ಬೇಡಿಕೆಗಳ ಕುರಿತು ಗಮನ ಸೆಳೆದರು. ಮಾನವಕುಲ ಈ ಭೂಮಂಡಲದಲ್ಲಿ ಸೃಷ್ಟಿಯಾದ ಗಳಿಗೆಯಿಂದಲೂ ಕೊಡವಲ್ಯಾಂಡ್ ಆದಿಮಸಂಜಾತ ಏಕ ಬುಡಕಟ್ಟುಗಳಾದ ಕೊಡವರು ಆರ್ವಿಭವಿಸಿ, ಅರಳಿ ವಿಕಾಸವಾಗಿದ್ದಾರೆ. ಕೊಡವರು ಜಲದೇವತೆ-ಪ್ರಕೃತಿಯೊಂದಿಗೆ ಬೆರೆತಿರುವ ಆನಿಮಿಸ್ಟಿಕ್ ಬುಡಕಟ್ಟು ಸಮುದಾಯವಾಗಿದೆ. ಕೊಡವರಲ್ಲಿ ಯಾವುದೇ ಉಪಜಾತಿ-ಉಪವರ್ಗ, ಉಪ ಪಂಗಡಗಳಿಲ್ಲ. ಧರ್ಮ ಪರಿವರ್ತನೆ, ಧರ್ಮಧೀಕ್ಷೆ ಮೂಲಕ ಕೊಡವರ ಸಂಖ್ಯೆ ವೃದ್ಧಿಸುವ ಪದ್ಧತಿಯೂ ಇಲ್ಲ. ಕೊಡವರು ಯಾವುದೇ ಮಿಶನರಿ ಧರ್ಮವಲ್ಲ. ಕೊಡವರಲ್ಲಿ ಧರ್ಮಗರು-ರಾಜಗುರು ಪದ್ಧತಿ ಇಲ್ಲ. ಸಂವಿಧಾನವೇ ನಮಗೆ ರಾಜಗುರು, ಧರ್ಮಗುರು. ಆದ್ದರಿಂದ ಕೊಡವರಿಗೆ ರಾಜ್ಯಾಂಗ ಖಾತ್ರಿ ದೊರಕಬೇಕು ಎಂದು ಒತ್ತಾಯಿಸಿದರು. ಕೊಡವರು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಲ್ಲ. ಆದರೆ ಇಂದು ಜನಗಣತಿಯೂ ಸೇರಿದಂತೆ ರಾಜ್ಯದ ದಾಖಲೆಗಳ ಎಲ್ಲಾ ಕಾಲಂಗಳು ಈ ದೇಶದ ಬಹುಧರ್ಮ, ಪ್ರಬಲಧರ್ಮ ಮತ್ತು ಬಲಾಢ್ಯ ಜಾತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಲ್ಪಟ್ಟಿದೆ. ಧರ್ಮ ಮತ್ತು ಜಾತಿ ಬಗ್ಗೆ ಮಾತ್ರ ಉಲ್ಲೇಖ ಇರುವುದರಿಂದ ಆನಿಮಿಸ್ಟಿಕ್ ನಂಬಿಕೆಯ ಕೊಡವರು ಅನಿವಾರ್ಯವಾಗಿ ಧರ್ಮ ಮತ್ತು ಜಾತಿ ಕಾಲಂಗಳನ್ನು ಒಪ್ಪಿಕೊಂಡು ಕೊಡವ ಎಂದು ದಾಖಲಿಸಬೇಕಾದ ಪರಿಸ್ಥಿತಿ ಬಂದಿದೆ. ಆದಿಮಸಂಜಾತ ಏಕ ಜನಾಂಗೀಯ ಆ್ಯಯನಿಮಿಸ್ಟಿಕ್ ನಂಬಿಕೆಯ ಕೊಡವರು ಯಾವುದೇ ಜಾತಿ, ಧರ್ಮದ ಬಂಧನ ಅಥವಾ ಕಳಂಕವಿಲ್ಲದೆ ಸ್ವತಂತ್ರವಾಗಿ ಬದುಕಿದ ಮತ್ತು ಬದುಕುತ್ತಿರುವ ಅತೀ ಅಪರೂಪದ ಸೂಕ್ಷ್ಮ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಕೊಡವ ನೆಲ ಬಿಟ್ಟರೆ ಬೇರೆ ಎಲ್ಲೂ ಕೊಡವರಿಗೆ ಸ್ವಂತ ಸ್ಥಳವಿಲ್ಲ. ಇಂದಿನ ಕಾಲಮಾನದಲ್ಲಿ ಕೊಡವರ ರಕ್ಷಣೆಯಾಗಬೇಕಾಗಿದೆ ಮತ್ತು ಸಂಪೂರ್ಣ ಸಬಲೀಕರಣವಾಗಬೇಕಾಗಿದೆ. ಇದು ದೇಶದ ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ವಿವರಿಸಿದರು. 2026-27 ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಅಳವಡಿಸಬೇಕು. ಇದರ ಆಧಾರದಡಿ ಮುಂದೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿರುವ ಈ ಜನಗಣತಿಯು ಕೊಡವರ ರಾಜಕೀಯ ಸಬಲೀಕರಣ, ಸ್ವಯಂ ನಿರ್ಧಾರದ ಹಕ್ಕು ಸ್ಥಾಪಿಸಲು ಮೆಟ್ಟಿಲಾಗಲಿದೆ. ಅಲ್ಲದೆ ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರಿಯಲು ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು. ಕೊಡವರ ವಿರಳ ಸಂಖ್ಯೆಯು ಕೊಡವರ ಪ್ರತ್ಯೇಕ ಅಸ್ತಿತ್ವ ಮತ್ತು ಹೆಗ್ಗುರುತನ್ನು ಜೋಪಾನ ಮಾಡಲು ವಿಶೇಷ ಹಕ್ಕು ಕೇಳಲೆಬಾರದು, ಕೊಡವರೇನಿದ್ದರು ಬಲಾಡ್ಯ ಜನಸಂಖ್ಯಾ ಬಾಹುಳ್ಯದೊಂದಿಗೆ ಗುರುತಿಸಿಕೊಳ್ಳಬೇಕೆನ್ನುವ ಅವ್ಯಕ್ತ ಕಾರ್ಯಸೂಚಿಯೊಂದು ಪಿತೂರಿ ಮಾಡುತ್ತಾ ಬಂತು. ಕೊಡವರು ಭೂದೇವಿ ಅರ್ಥಾತ್ ಅವರ ಜನ್ಮಭೂಮಿ ಕೊಡವಲ್ಯಾಂಡ್, ಜಲದೇವಿ ಕಾವೇರಿ, ವನದೇವಿ/ದೇವಕಾಡ್, ಪಾರಮಾರ್ಥಿಕ ಮಂದ್, ಧಾರ್ಮಿಕ ಸಂಸ್ಕಾರ, ತೋಕ್-ಗನ್, ಗೆಜ್ಜೆತಂಡ್, ಸೂರ್ಯ-ಚಂದ್ರ, ಪರ್ವತ ದೇವಿ, ಗುರು-ಕಾರೋಣ, ಸ್ವರ್ಗೀಯ ದಿವ್ಯಾತ್ಮಗಳು, ತೂಟಂಗಳ-ಕ್ಯಾಕೋಳ (ಸಮಾಧಿ ಸ್ಥಳ) ಗಳನ್ನು ಪೂಜ್ಯಭಾವನೆಯಿಂದ ಆರಾಧಿಸುತ್ತಾರೆ. ಸಪ್ತಪಧಿ ಇಲ್ಲದ ಮದುವೆ, ಮಂಗಳ ಸೂತ್ರ ಪದ್ಧತಿ ಇಲ್ಲದ (ಮದುವೆಯ ಮುನ್ನದಿನ ರಾತ್ರಿ ಮಧುಮಗಳ ತಾಯಿ ಮಧುಮಗಳ ಕೊರಳಿಗೆ ಪವಿತ್ರ ‘ಪತ್ತಾಕ್’ ಕಟ್ಟುವ ವಿಶಿಷ್ಟ ಪರಂಪರೆ ನಡೆದು ಬಂದಿದೆ.) ಕೊಡವರ ಎಲ್ಲಾ ಶುಭಕಾರ್ಯ, ಅಶುಭಕಾರ್ಯಗಳಲ್ಲಿ ಮದ್ಯ ಸಮರಾಧನೆ ಮತ್ತು ಪಂದಿಕರಿ ಬೋಜನ ಕಡ್ಡಾಯ. ತೋಕ್-ಗನ್ ಎಲ್ಲಾ ಕಾರ್ಯದಲ್ಲೂ ಪೂಜಾ ಪರಿಕರವಾಗಿ ಬಳಸುತ್ತೇವೆ. ಈ ರೀತಿಯ ಸಂಸ್ಕಾರವನ್ನ ಆನಿಮಿಸ್ಟಿಕ್ ನಂಬಿಗೆಯ ಜನರೆಂದು ವಿಶ್ವರಾಷ್ಟ್ರ ಸಂಸ್ಥೆ ಗುರುತಿಸಿದೆ. ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ನಮ್ಮ ಅಸ್ತಿತ್ವ, ಹೆಗ್ಗುರುತು, ಅಸ್ಮಿತೆ ಉಳಿಯುವುದರೊಂದಿಗೆ ನಮ್ಮ ಜನ್ಮಭೂಮಿಯಲ್ಲಿ ನಮ್ಮ ಚಾರಿತ್ರಿಕ ನಿರಂತರತೆಗೆ ಕಾಯ್ದೆ ಬದ್ಧ ರಕ್ಷಣೆ ದೊರಕಬೇಕಾದರೆ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವ ಎಂದು ದಾಖಲಿಸಬೇಕು. ಹೊರ ರಾಷ್ಟ್ರದ ಬಾಂಗ್ಲದೇಶಿ ರೋಹಿಂಗ್ಯಾಗಳಿಗೆ ನೆಲೆ ಕಲ್ಪಿಸಲು ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಮುಂದೆ ಜನಗಣತಿ ಸಂದರ್ಭ ಅವರನೆಲ್ಲ ಕೊಡವ ಎಂದು ದಾಖಲಿಸಿ ಮತಬ್ಯಾಂಕ್ ವೃದ್ಧಿ ಮಾಡಿಕೊಂಡು ಅವರ ಜನಸಂಖ್ಯಾ ವೃದ್ಧಿಯನ್ನು ತೋರಿಸಿ ಮುಂದೆ ಕೊಡಗಿಗೆ ದುಪ್ಪಟ್ಟು ಮತದಾರರ ಆಧಾರದಲ್ಲಿ ಪಾರ್ಲಿಮೆಂಟ್ ಸೀಟ್ ಬೇಕೆಂದು ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳು ಲಜ್ಜೆಗೇಡಿ ಮತಭಿಕ್ಷೆ ಕಾರ್ಯದಲ್ಲಿ ತೊಡಗಿದ್ದು, ಇದಕ್ಕಾಗಿ ಕೊಡವರ ಭೂಮಿಗಳನ್ನು ಬಲವಂತ ತೆರವುಗೊಳಿಸಿ ಅಲ್ಲಿ ಇವರಿಗೆಲ್ಲ ಭೂಮಿ, ವಸತಿ ನಿರ್ಮಿಸುವ ಒಳಸಂಚು ನಡೆಲಾಗುತ್ತಿದೆ. ಇದಕ್ಕೆ ಪ್ರತಿಭಟಿಸಿದರೆ, ಕೊಡಗಿನಲ್ಲಿ ಕಾರ್ಮಿಕರ ಕೊರತೆಯ ನೆಪ ತೋರಿಸಲಾಗುತ್ತದೆ. ಮುಂದೆ ಹರಾಜಕತೆ ನಿರ್ಮಾಣವಾಗಿ ಸ್ಥಳೀಯರಿಗೆ ರಕ್ಷಣೆ ಇಲ್ಲದಾಗುತ್ತದೆ ಎಂದು ಎನ್.ಯು.ನಾಚಪ್ಪ ಕಳವಳ ವ್ಯಕ್ತಪಡಿಸಿದರು. ಕಾರ್ಮಿಕರ ಕೊರತೆ ಇದ್ದರೆ ಟರ್ಕಿ ದೇಶದ ವಲಸಿಗ ಕಾರ್ಮಿಕರನ್ನು ಪ್ಯಾರಿಸ್‍ನಲ್ಲಿ ಗೆಸ್ಟ್ ವರ್ಕರ್ ಎಂದು ಪರಿಗಣಿಸಲಾಗಿದೆ. ಮೋದಿ-ಶೇಖ್ ಹಸಿನಾ ಒಪ್ಪಂದ 2015ರಲ್ಲಿ ಢಾಕಾದಲ್ಲಿ ನಡೆದಾಗ ಈ ಗೆಸ್ಟ್ ವರ್ಕರ್ ರೀತಿ ಮುನ್ನಲೆಗೆ ಬಂದಿದೆ. ಅದೇ ರೀತಿ ಕೊಡಗಿನಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ಗೆಸ್ಟ್ ವರ್ಕರ್ ಪರ್ಮಿಟ್ ಮೇಲೆ ಆಹ್ವಾನಿಸಿ ಕೆಲಸ ಮುಗಿದ ನಂತರ ಅವರ ಊರುಗಳಿಗೆ, ದೇಶಗಳಿಗೆ ಹಿಂತಿರುಗಬೇಕು. ಪುನಃ ಕೃಷಿ ವರ್ಷ ಆರಂಭದಲ್ಲಿ ಅವರ ಗೆಸ್ಟ್ ವರ್ಕರ್ ಪರ್ಮಿಟ್ ನವೀಕರಿಸಬೇಕು, ಈ ನಿಯಮ ಜಾರಿಯಾಗಬೇಕು ಎಂದು ಎನ್.ಯು.ನಾಚಪ್ಪ ಸಲಹೆ ನೀಡಿದರು. 2026-27ರ 16ನೇ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಹಾಗೂ ಕಾಲಮ್ ವ್ಯವಸ್ಥೆ ಮಾಡಬೇಕು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸಂವಿಧಾನದಡಿ ಕೊಡವರನ್ನು ಎಸ್‍ಟಿ ಪಟ್ಟಿಯಲ್ಲಿ ವರ್ಗೀಕರಿಸಬೇಕು. ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಉಳಿಸಬೇಕು, ಸಿಕ್ಕಿಂನ ಬೌದ್ಧ ಸನ್ಯಾಸಿಗಳಿಗೆ ನೀಡಿದ “ಸಂಘ” ಕ್ಷೇತ್ರದಂತೆಯೇ 2026-27 ರ ಮತಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದ ಸಂದರ್ಭ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇಷ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ವಿಶ್ವರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನಡಿ ಆದಿಮಸಂಜಾತ (ಆನಿಮಿಸ್ಟಿಕ್) ಕೊಡವ ಸಮುದಾಯವನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು. ಇಲ್ಲಿಯವರೆಗೆ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೆÇನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು, ಚೇರಂಬಾಣೆ, ಚೆಟ್ಟಳ್ಳಿ, ಅಮ್ಮತ್ತಿ, ಶ್ರೀಮಂಗಲ, ಬುಟ್ಟಂಗಾಲ, ಹುದಿಕೇರಿ, ಕುಟ್ಟ ಮತ್ತು ಪಾಲಿಬೆಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು. ಮಾನವ ಸರಪಳಿಯಲ್ಲಿ ಕಾಣತಂಡ ನವ್ಯಾ ನವೀನ್, ಚೆಪ್ಪುಡಿರ ರಾಮಕೃಷ್ಣ, ಪಾಳೆಂಗಡ ಮನು, ಬೊಳ್ಳಿಮಾಡ ನಂಜಪ್ಪ, ನೆಲ್ಲಮಕ್ಕಡ ವಿವೇಕ್, ಮನೆಯಪಂಡ ಬೋಪಣ್ಣ, ಕೊಕ್ಕಂಡ ದಿನೇಶ್, ಕಾಂಡೇರ ಸುರೇಶ್, ಅಜ್ಜಿಕುಟ್ಟೀರ ಲೋಕೇಶ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶೆರಿನ್, ಅಮ್ಮಂಡ ಶೆರಿನ್, ಅಮ್ಮಂಡ ಧನು, ಅಪ್ಪೆಂಗಡ ಮಾಲೆ, ಚೆಂಬಂಡ ಜನತ್, ಮನೆಯಪಂಡ ರತನ್ ಅಯ್ಯಪ್ಪ, ಸಂಜು ಕೋಣಿಯಂಡ, ಕಳ್ಳಿಚಂಡ ಅಶ್ವಥ್, ಕಳ್ಳಿಚಂಡ ಕಾವೇರಿಪ್ಪ, ಕಾಣತಂಡ ನವೀನ್, ಸಣ್ಣುವಂಡ ಮಂದಣ್ಣ, ಚೆಕ್ಕೇರ ಕಿಶ ತಮ್ಮಯ್ಯ, ಕಲಿಯಪಂಡ ಮದನ್, ಮನೆಯಪಂಡ ಮಂಜು, ಮನೆಯಪಂಡ ಸುಬ್ಬಯ್ಯ, ಗಾಂಡಂಗಡ ಅಶೋಕ್, ಗಾಂಡಂಗಡ ಗಣಪತಿ, ಗಾಂಡಂಗಡ ಪೂಣಚ್ಚ, ಗಾಂಡಂಗಡ ತಮ್ಮಯ್ಯ, ಪುದಿಯೊಕ್ಕಡ ಪೃಥ್ವಿ, ಗಾಂಡಂಗಡ ಡಾಲಿ, ಮಂಡೇಪಂಡ ಸಚಿನ್, ಮಂಡೇಪಂಡ ಕಿರಣ್, ಗಾಂಡಂಗಡ ಜೋಯಪ್ಪ, ಮಂಡೇಪಂಡ ಕಿಶನ್, ಕುಪ್ಪಂಡ ರಾಜೀವ್ ಪಾಲ್ಗೊಂಡಿದ್ದರು. ಗುರು-ಕಾರೋಣ-ಸೂರ್ಯ-ಚಂದ್ರ, ಜಲದೇವಿ ಕಾವೇರಿ, ಪರ್ವತ ದೇವಿ, ಪ್ರಕೃತಿ ದೇವಿ, ಭೂದೇವಿ ಮತ್ತು ಪವಿತ್ರ ಸಂವಿಧಾನದ ಹೆಸರಿನಲ್ಲಿ ಸಿಎನ್‍ಸಿ ಹೋರಾಟದ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಷ್ಟ್ರಗೀತೆ ಜನ-ಗಣ-ಮನ ಪಠಣದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.









